ಶತ್ರು ರಾಷ್ಟ್ರ ಪಾಕಿಸ್ತಾನ ಮೂಲದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ದೇಶದ್ರೋಹದ ಆರೋಪದಡಿ ತುಮಕೂರು ಮತ್ತು ದಾವಣಗೆರೆ ತಲಾ ಒಬ್ಬರು ಶಂಕಿತ ಉಗ್ರರನ್ನು ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ/ ತುಮಕೂರು : ಶತ್ರು ರಾಷ್ಟ್ರ ಪಾಕಿಸ್ತಾನ ಮೂಲದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ದೇಶದ್ರೋಹದ ಆರೋಪದಡಿ ತುಮಕೂರು ಮತ್ತು ದಾವಣಗೆರೆ ತಲಾ ಒಬ್ಬರು ಶಂಕಿತ ಉಗ್ರರನ್ನು ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಮಕೂರು ನಗರದ ಶ್ರೀರಾಮನಗರ ನಿವಾಸಿ ಅಲ್ಲಾ ಬಕ್ಷು (24), ದಾವಣಗೆರೆ ಬೀಡಿ ಲೇಔಟ್ ನಿವಾಸಿ ಜಮೀರ್ ಖಾನ್ (22) ಎಂದು ಗುರುತಿಸಲಾಗಿದೆ.
ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಉಗ್ರರು, ಗ್ಯಾಂಗ್‌ಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಭಾರತೀಯ ಯುವಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ರೀತಿ ಸಂದೇಶಗಳನ್ನು ಹಾಕುತ್ತಿದ್ದರು. ಇವರನ್ನು ಜಾಲತಾಣದಲ್ಲಿ ಹಿಂಬಾಲಿಸುತ್ತಾ ಭಾರತದ ವಿರುದ್ಧ ಕಮೆಂಟ್ ಮಾಡುತ್ತಿದ್ದ ಎಂಬ ಆರೋಪ ಬಂಧಿತರ ವಿರುದ್ಧ ಇದೆ.
ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಯುವಕರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಕ್ಯಾತ್ಸಂದ್ರ ಠಾಣೆಯ ಇನ್‌ಸ್ಪೆಕ್ಟರ್ ಅವಿನಾಶ್ ತಮ್ಮ ಸಿಬ್ಬಂದಿಯೊಂದಿಗೆ ಗುರುವಾರ ರಾತ್ರಿ ಅಲ್ಲಾ ಬಕ್ಷುವನ್ನು ಬಂಧಿಸಿದ್ದಾರೆ. ಬಳಿಕ ದಾವಣಗೆರೆಗೆ ತೆರಳಿ ಜಮೀರ್ ಖಾನ್‌ನನ್ನು ಸೆರೆ ಹಿಡಿದಿದ್ದಾರೆ.
ಪೊಲೀಸ್ ಕಚೇರಿ ಬಳಿಯೇ ವಾಸ:
ತುಮಕೂರಿನ ಅಲ್ಲಾ ಬಕ್ಷು ಕೆಲಸ ಕಾರ್ಯವಿಲ್ಲದೆ ಅಲೆದಾಡಿಕೊಂಡಿದ್ದ. ತುಮಕೂರು ಡಿವೈಎಸ್‌ಪಿ ಹಾಗೂ ಜಿಲ್ಲಾ ಗುಪ್ತಚರ ಇಲಾಖೆಯ ಸಮೀಪವೇ ಇರುವ ಶ್ರೀರಾಮನಗರದಲ್ಲಿ ವಾಸವಿದ್ದ. ಆದರೂ ಈತನ ಚಟುವಟಿಕೆ ಪೊಲೀಸರ ಗಮನಕ್ಕೆ ಬಂದಿರಲಿಲ್ಲ. ಅಲ್ಲಾ ಬಕ್ಷು ಬಂಧಿಸಿದ ಬಳಿಕ ಈತನೊಂದಿಗೆ ಜಮೀರ್ ಖಾನ್ ಸಂಪರ್ಕ ಇರುವುದು ತಿಳಿದು ಆತನನ್ನು ದಾವಣಗೆರೆಯ ರೈಲ್ವೇ ನಿಲ್ದಾಣದಲ್ಲಿ ವಶಕ್ಕೆ ಪಡೆದು ಬಳಿಕ ಬಂಧಿಸಲಾಗಿದೆ.
ಜಮೀರ್ ಖಾನ್ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಜಾಲತಾಣದಲ್ಲಿ ಸಕ್ರಿಯ:
ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ ಮೂಲದ ಐಎಸ್‌ಐ ಬೆಂಬಲಿತ ಉಗ್ರ, ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಹಾಗೂ ರಾಣಾ ಉನೇನ್ ಎಂಬ ಬೇರೆ ಬೇರೆ ಹೆಸರಿನಲ್ಲಿ ಐಡಿ ಸೃಷ್ಟಿಸಿ ಭಾರತದ ಯುವಕರನ್ನು ಪ್ರಚೋದಿಸುತ್ತಿದ್ದರು. ಅವರ ಮೇಲೆ ರಾಷ್ಟ್ರೀಯ ತನಿಖಾ ದಳ, ಗುಪ್ತಚರ ಇಲಾಖೆಗಳು ಹದ್ದಿನ ಕಣ್ಣಿಟ್ಟಿದ್ದವು. ಈ ವೇಳೆ ಪಾಕ್ ಉಗ್ರರ ಎಕ್ಸ್ ಖಾತೆಗಳನ್ನು ಜಮೀರ್ ಖಾನ್, ಅಲ್ಲಾಭಕ್ಷಿ ಹಿಂಬಾಲಿಸುತ್ತಿರುವುದು ಕಂಡುಬಂದಿತ್ತು. ಅಲ್ಲದೆ ಭಾರತದ ಭದ್ರತೆ, ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದದ್ದು, ಚಾಟ್ ಕೂಡ ನಡೆಸುತ್ತಿದ್ದರು ಎನ್ನುವುದು ಕಂಡುಬಂದಿತ್ತು. ಇವರ ಮೇಲೆ ಎನ್‌ಐಎ ತೀವ್ರ ನಿಗಾ ವಹಿಸಿತ್ತು. ಅವರ ಕಾರ್ಯ ಚಟುವಟಿಕೆ ಮತ್ತಷ್ಟು ವಿಸ್ತರಿಸುವ ಸುಳಿವು ಸಿಗುತ್ತಿದ್ದಂತೆ ಸ್ಥಳೀಯ ಪೊಲೀಸರನ್ನು ಎನ್‌ಐಎ ಎಚ್ಚರಿಸಿತ್ತು. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಲೆಗೆ ಬಿದ್ದಿದ್ದು ಹೇಗೆ?
ಪಾಕ್ ಮೂಲದ ಉಗ್ರರು ಜಾಲತಾಣ ಬಳಸಿ ಭಾರತೀಯರನ್ನು ದೇಶದ ವಿರುದ್ಧವೇ ಪ್ರಚೋದಿಸುತ್ತಿದ್ದರು
ಇಂಥವರ ಖಾತೆಗಳನ್ನು ಹಿಂಬಾಲಿಸುತ್ತಿದ್ದ ತುಮಕೂರಿನ ಅಲ್ಲಾ ಬಕ್ಷು, ದಾವಣಗೆರೆಯ ಜಮೀರ್ ಖಾನ್
ಪಾಕ್ ಉಗ್ರರ ಪೋಸ್ಟ್ ಬೆಂಬಲಿಸಿ ಕಮೆಂಟ್ ಹಾಕುತ್ತಾ, ಅವರ ಸಂಪರ್ಕದಲ್ಲಿದ್ದ ಬಕ್ಷು ಮತ್ತು ಜಮೀರ್
ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ರಾಷ್ಟ್ರೀಯ ತನಿಖಾ ದಳ. ಈ ಕುರಿತು ಕ್ಯಾತ್ಸಂದ್ರ ಪೊಲೀಸರಿಗೆ ಮಾಹಿತಿ
ಮಾಹಿತಿ ಸಿಕ್ಕ ಬೆನ್ನಲ್ಲೇ ಎರಡೂ ನಗರಗಳಲ್ಲಿ ಪೊಲೀಸರ ದಾಳಿ. ಶಂಕಿತ ಉಗ್ರರ ವಿಚಾರಣೆ, ಬಳಿಕ ಬಂಧನ


