ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಶ್ರೀ ಕೃಷ್ಣ ಚಿತ್ರಮಂದಿರದ ಹಿಂಭಾಗ ಮಂಜುನಾಥ್ ಎಂಬುವವರಿಗೆ ಸೇರಿದ ಶೆಡ್ ನಲ್ಲಿ ಕಟ್ಟಲಾಗಿದ್ದ ಮೇಕೆಗಳ ದಾಳಿ ಮಾಡಿದ ನಾಯಿಗಳು 8 ಮೇಕೆಗಳನ್ನು ಸಾಯಿಸಿವೆ. ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಹತ್ತಾರು ನಾಯಿಗಳು ಮೇಕೆಗಳ ಮೇಲೆ ದಿಢೀರನೇ ದಾಳಿ ಮಾಡಿವೆ. ಶೆಡ್ ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮೇಕೆಗಳನ್ನು ಕಟ್ಟಲಾಗಿತ್ತು. ನಾಯಿಗಳ ದಾಳಿಗೆ ಬೆದರಿದ ಮೇಕೆಗಳು ಚಿರುಚಾಟ ಮಾಡುತ್ತಿದ್ದುದನ್ನು ಗಮನಿಸಿದ ದಾರಿ ಹೋಕರು ನಾಯಿಗಳನ್ನು ಓಡಿಸಲು ಹರಸಾಹಸ ಪಟ್ಟರು.ಆ ವೇಳೆಗಾಗಲೇ 8 ಮೇಕೆಗಳನ್ನು ಸತ್ತಿದ್ದವು. ಅಲ್ಲದೇ ಎರಡು ಮೇಕೆಗಳನ್ನೂ ಗಾಯಗೊಳಿಸಿದ್ದವು. ಹಾಡುಹಗಲೇ ಹಿಂಡು ಹಿಂಡಾಗಿ ಬರುವ ನಾಯಿಗಳ ಕಾಟ ಅತಿಯಾಗಿದೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲೇ ಕುರಿ, ಕೋಳಿಯ ಮಾಂಸದಂಗಡಿಗಳು ಇವೆ. ಇಲ್ಲಿಯ ಕಷ್ಮಲಗಳನ್ನು ತಿನ್ನಲು ನಾಯಿಗಳ ಹಿಂಡೇ ಇಲ್ಲಿ ಬಿಡಾರ ಹೂಡುತ್ತಿವೆ. ನಾಯಿಗಳನ್ನು ನಿಯಂತ್ರಣ ಮಾಡುವುದೇ ಪಟ್ಟಣ ಪಂಚಾಯಿತಿಗೆ ತಲೆನೋವಾಗಿದೆ. ನಾಯಿಗಳನ್ನು ಸಾಯಿಸಬಾರದು ಎಂಬ ಆದೇಶವಿದೆ. ಆದರೆ ಅದನ್ನು ಹಿಡಿದು ಬೇರೆಡೆಗೆ ಸಾಗಿಸಬಹುದು. ಆದರೆ ಎಲ್ಲಾ ಕಡೆಯೂ ನಾಯಿಗಳನ್ನು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಾಟ ಮಾಡಲಾಗುತ್ತಿದೆ. ಇಲ್ಲಿದ್ದ ನಾಯಿ ಮತ್ತೊಂದು ಊರಿಗೆ ಹೋಗುವುದು ಸಾಮಾನ್ಯವಾಗಿದೆ. ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ನೀಡಬಹುದು. ಆದರೆ ಈಗ ಇರುವ ನಾಯಿಗಳ ಸಂಖ್ಯೆಯೇ ಹೆಚ್ಚಾಗಿದೆ. ಸದ್ಯ ಇರುವ ನಾಯಿಗಳ ಹತೋಟಿ ಮಾಡುವುದು ಹೇಗೆ ಎಂಬ ಜಿಜ್ಞಾಸೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕಾಡುತ್ತಿದೆ. ಒಟ್ಟಾರೆ ಪಟ್ಟಣದಲ್ಲಿ ದಿನೇ ದಿನೇ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿ ಸಾಕಷ್ಟು ಶಾಲೆಗಳಿವೆ. ಅಲ್ಲಿಗೆ ಪುಟಾಣಿ ಮಕ್ಕಳು ತೆರಳುವ ವೇಳೆ ದಾಳಿ ಮಾಡಿದರೆ ಗತಿ ಏನು? ಪಟ್ಟಣದಲ್ಲಿ ಮಕ್ಕಳು ಓಡಾಡುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಏನಾದರೂ ಮಾಡಿ ನಾಯಿಗಳ ನಿಯಂತ್ರಣ ಮಾಡಿ ಎಂದು ನಾಗರೀಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಪಶು ವೈದ್ಯಾಧಿಕಾರಿ ಡಾ.ರೇವಣ ಸಿದ್ದಪ್ಪ ಹಾಗೂ ಸಿಬ್ಬಂದಿ ಮರಣೋತ್ತರ ಪರೀಕ್ಷೆ ನಡೆಸಿದರು. ಮರಣ ಹೊಂದಿದ ಮೇಕೆಗಳಿಗೆ ಪರಿಹಾರ ಧನ ಕೊಡಿಸುವ ಭರವಸೆಯನ್ನು ಮೇಕೆಯ ಮಾಲೀಕ ಮಂಜುನಾಥ್ ಗೆ ಡಾ.ರೇವಣ ಸಿದ್ದಪ್ಪ ನೀಡಿದ್ದಾರೆ.