ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು 4 ಗ್ರಾಮಗಳಲ್ಲಿ ₹1.10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಬೆಳವಾಡಿ ಕೆರೆಗೂ ಎತ್ತಿನಹೊಳೆಯ ಪೈಪ್ ಲೈನ್ ಮೂಲಕ ನೀರು ಹರಿಸಲು ಮುಖ್ಯಮಂತ್ರಿ ನೀರಾವರಿ ಇಲಾಖೆಗೆ ನಿರ್ದೇಶಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು ನಾಲ್ಕು ಗ್ರಾಮಗಳಲ್ಲಿ ₹1.10 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ ನಮ್ಮದು ಕೃಷಿ ನಂಬಿ ಬದುಕುತ್ತಿರುವ ದೇಶವಾಗಿದೆ. ಈ ಬಾರಿ ಉತ್ತಮ ಮಳೆಯಾಗಿಲ್ಲ. ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ. ರೈತರು ಕೆರೆ ತುಂಬಿಸಲು ಹೇಳಿದ್ದರು. ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ ಕೆರೆಗಳು ಮಳೆ ಬಂದಾಗ ಮಾತ್ರ ಈ ಹಿಂದೆ ತುಂಬಿವೆ. ಎತ್ತಿನಹೊಳೆ ಯೋಜನೆ ಮೂಲಕ ಹಳೇಬೀಡು ಕೆರೆ ತುಂಬಿಸಲಾಗಿದೆ. ಬೆಳವಾಡಿ ಕೆರೆಗೂ ನೀರು ಹರಿಸಬೇಕೆಂದು ಮುಖ್ಯಮಂತ್ರಿಯಿಂದ ನೀರಾವರಿ ಇಲಾಖೆಗೆ ಸೂಚನೆ ಕೊಡಿಸಲಾಗಿದೆ ಎಂದು ತಿಳಿಸಿದರು.ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹50 ಕೋಟಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದರು. ಈ ಅನುದಾನದಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗೆ ₹10 ಕೋಟಿ ನೀಡಿ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಜನರ ಬದುಕಿಗಾಗಿ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಕ್ಷೇತ್ರದ ಎಲ್ಲಾ ಸಮಾಜದ ಸಮುದಾಯ ಭವನಗಳು ಮತ್ತು ದೇವಾಲಯ ಗಳಿಗೆ ₹7 ಕೋಟಿ ನೀಡಲಾಗಿದೆ. ಅಲ್ಪಸಂಖ್ಯಾತರ ಇಲಾಖೆಯಿಂದ ಅಲ್ಪಸಂಖ್ಯಾತರ ಖಬರ್ ಸ್ಥಾನ್ ಮತ್ತು ಮಸೀದಿಗಳಿಗೂ ಸಹ ₹2 ಕೋಟಿ ಕೊಡುವಂತ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಹೇಳಿದರು.ಗ್ಯಾರಂಟಿ ಯೋಜನೆಗಳ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ. ಅಭಿವೃದ್ಧಿ ಸಾಕಷ್ಟು ಅನುದಾನ ನೀಡುವುದ ರೊಂದಿಗೆ ಆಡಳಿತ ಯಂತ್ರ ಚುರುಕುಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಬಸವೇಶ್ವರಸ್ವಾಮಿ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ, ರಂಗನಾಥ ಸ್ವಾಮಿ ದೇವಾಲಯದ ಯಾತ್ರಿ ನಿವಾಸಕ್ಕೆ ಅನುದಾನ ಕೊಡಲಾಗಿದೆ. ದೇವಾಲಯ, ಸಮುದಾಯ ಭವನಗಳಿಗೂ ಹಣ ನೀಡಲಾಗಿದೆ. ರಸ್ತೆಗೂ ಕೊಡಲಾಗಿದೆ. ಮಸೀದಿಗೆ ₹೨೦ ಲಕ್ಷ ನೀಡಲಾಗಿದೆ. ಹಳೆ ಹಟ್ಟಿ ದೇವಸ್ಥಾನಕ್ಕೆ ₹೧೦ ಲಕ್ಷ ನೀಡುವ ಮೂಲಕ ಅಭಿವೃದ್ಧಿ, ಜನರ ಬದುಕು ಮತ್ತು ದೇವರ ಮೇಲಿರುವ ಭಕ್ತಿಯಿಂದ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್‌ನ ಸುಮಂತ್, ಸೀತಾರಾಮ್ ನಾಯಕ್, ವೆಂಕಟೇಶ್ ನಾಯಕ್, ಲೋಕೇಶ್ ಉಪಸ್ಥಿತರಿದ್ದರು.----ಬಾಕ್ಸ್---
ಹೆಣ್ಣುಮಕ್ಕಳ ಬಗ್ಗೆ ಕೆಲವರದ್ದು, ಮೊಸಳೆ ಕಣ್ಣೀರು: ಶಾಸಕ ತಮ್ಮಯ್ಯಚುನಾವಣೆ ನಡೆಯುವಾಗ ಒಂದು ಪಕ್ಷದ ಅಭ್ಯರ್ಥಿಯಾಗಿದ್ದೆ. ಗೆದ್ದ ಮೇಲೆ ಈ ಕ್ಷೇತ್ರದ ಶಾಸಕನಾಗಿದ್ದೇನೆ. ಹಾಗಾಗಿ, ಯಾವತ್ತು ಜಾತಿ - ಪಕ್ಷ ಬೇಧ ಮಾಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಸಿಕ್ಕಿರುವ ಈ ಒಂದು ಅವಕಾಶವನ್ನು ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕೆಲವರು ಇಲ್ಲಿನ ಹೆಣ್ಣು ಮಕ್ಕಳು ಬೇರೆ ಕಡೆ ಕೆಲಸಕ್ಕೆ ಹೋಗುತ್ತಿರುವುದನ್ನು ನೋಡಿದರೆ ಬೇಜಾರಾಗುತ್ತದೆ ಎಂದು ಮೊಸಳೆ ಕಣ್ಣೀರು ಹಾಕಿ ಹೇಳುತ್ತಿದ್ದರು. ತಮ್ಮ ಅಧಿಕಾವಧಿಯಲ್ಲಿ ಜವಳಿ ಪಾರ್ಕ್ ಮಂಜೂರು ಮಾಡಿಸಲಿಲ್ಲ. ಆದರೆ, ನಿಕಟಪೂರ್ವ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲೆಗೆ 2 ಜವಳಿ ಪಾರ್ಕ್ ಕೊಟ್ಟಿದ್ದಾರೆ.10 ವರ್ಷದ ಹಿಂದೆ ಈ ಪ್ರಯತ್ನ ಮಾಡಿದ್ದರೆ, ಈಗಾಗಲೇ ಜವಳಿ ಪಾರ್ಕ್ ಆಗುತ್ತಿತ್ತು ಎಂದರು.