ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಎಸ್.ಐ.ಆರ್ ಕಾರ್ಯದಲ್ಲಿರುವ ಅನೇಕ ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡದೆ, ಮತದಾರರು ಕಂಡು ಬಂದಿಲ್ಲವೆಂದು ಮೇಲಧಿಕಾರಿಗಳಿಗೆ ವರದಿ ನೀಡುತ್ತಿರುವುದನ್ನು ವಿರೋಧಿಸಿ ಮಹಾನಗರ ಪಾಲಿಕೆ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರಿಗೆ ಮನವಿ ಸಲ್ಲಿಸಿದರು.ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಎಸ್ಐಆರ್ ಪ್ರಕ್ರಿಯೆಗೆ ಚುನಾವಣಾ ಆಯೋಗವೇ ಆಗಸ್ಟ್ 8ರವರೆಗೆ ಸಮಯ ನೀಡಿದೆ. ಆದರೆ, ಶೇಕಡಾವಾರು ಪ್ರಮಾಣ ಹೆಚ್ಚಿಸಿಕೊಳ್ಳಲು ನಗರದಲ್ಲಿ ಈವರೆಗೆ ವಿತರಣೆ ಮಾಡದಿರುವ ಫಾರ್ಮ್‌ಗಳನ್ನು, ಮತದಾರರು ಸಿಕ್ಕಿಲ್ಲವೆಂದು ಕಾರಣ ನೀಡಿ ಫಾರ್ಮ್ ಭರ್ತಿ ಮಾಡಿ ವರದಿ ನೀಡಬೇಕೆಂಬ ಅಧಿಕಾರಿಗಳ ಸೂಚನೆಯಿಂದ ಅನೇಕ ಬಿಎಲ್‌ಒಗಳು ಮತದಾರರ ಮನೆಗಳಿಗೆ ಭೇಟಿ ನೀಡದೇ ತಮ್ಮ ವ್ಯಾಪ್ತಿಯಲ್ಲಿ ಮನೆಗಳು ಕಂಡು ಬಂದಿಲ್ಲ ಎಂದು ಫಾರ್ಮ್ ಭರ್ತಿ ಮಾಡಿ ಸಲ್ಲಿಸುತ್ತಿದ್ದಾರೆ. ಇದರಿಂದ ಅರ್ಹ ಮತದಾರರು ತಮ್ಮ ಮತಗಳನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ಇನ್ನೂ 15 ದಿನಗಳ ಕಾಲ ಮನೆ ಮನೆಗೆ ತೆರಳಿ ಎಸ್ಐಆರ್ ಕಾರ್ಯ ಮಾಡಲು ಬಿಎಲ್ಒಗಳಿಗೆ ಸೂಚಿಸಬೇಕು. ನಾವು ಮತ್ತು ನಮ್ಮ ಕಾರ್ಯಕರ್ತರು ಬಿಎಲ್ಒಗಳಿಗೆ ನೆರವಾಗುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ನಗರ ಮಂಡಲ ನಿಕಟಪೂರ್ವ ಅಧ್ಯಕ್ಷ ಶಂಕರ ಹೂಗಾರ ಮಾತನಾಡಿ, ಕಾಂಗ್ರೆಸ್ ಬಿ.ಎಲ್.ಎ ಗಳು ನೀಡುತ್ತಿರುವ ಸುಳ್ಳು ಮಾಹಿತಿ ಮೇರೆಗೆ ಅನೇಕ ಬಿಎಲ್ಒ ಗಳು, ಮತದಾರರ ಮನೆಗಳು ಸಿಗುತ್ತಿಲ್ಲ. ಬೇರೆ ಕಡೆ ಮತದಾರರಾಗಿದ್ದಾರೆ ಎಂದು ಎಸ್.ಐ.ಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರನ್ನು ಕೈಬಿಡುತ್ತಿರುವುದು ಸರಿಯಲ್ಲ ಎಂದರು.ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ರಾಜಶೇಖರ ಮಗಿಮಠ, ರಾಹುಲ ಜಾಧವ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಮಲ್ಲಿಕಾರ್ಜುನ ಗಡಗಿ, ವಿಠ್ಠಲ ಹೊಸಪೇಟೆ, ಗಿರೀಶ ಪಾಟೀಲ, ಮುಖಂಡ ಸಿದ್ದು ಬೆಲ್ಲದ ಮತ್ತಿತರರು ಇದ್ದರು.