ಸಾರಾಂಶ
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ 2ನೇ ವಾರ್ಡಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಐದಾರು ದಿನಗಳಿಂದ ಕೆಟ್ಟು ನಿಂತಿದ್ದು, ಜನರು ಶುದ್ಧ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಕೂಡಲೇ ಘಟಕ ದುರಸ್ತಿಗೆ ಕ್ರಮ ವಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಮದ 2ನೇ ವಾರ್ಡಿನಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಐದಾರು ದಿನಗಳಿಂದ ಕೆಟ್ಟು ನಿಂತಿದ್ದು, ಜನರು ಶುದ್ಧ ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಕೇಸೂರು ಹಾಗೂ ದೋಟಿಹಾಳ ಗ್ರಾಮದ ಬಹುತೇಕ ಜನರು ಹಾಗೂ ಹೋಟೆಲ್‌ನವರು ಇದೇ ಶುದ್ಧ ನೀರಿನ ಘಟಕ ಅವಲಂಬಿಸಿದ್ದರು. ಹೀಗಾಗಿ ಕೂಡಲೇ ದುರಸ್ತಿ ಮಾಡುವಂತೆ ಜನರು ಒತ್ತಾಯಿಸಿದ್ದಾರೆ.ಬೇಸಿಗೆ ಹಿನ್ನೆಲೆಯಲ್ಲಿ ಜನರು ನೀರು ಹೆಚ್ಚು ಬಳಸುತ್ತಿದ್ದಾರೆ. ಆದರೆ ಸಮರ್ಪಕವಾಗಿ ದೊರೆಯದ ಹಿನ್ನೆಲೆಯಲ್ಲಿ ಪರಿತಪಿಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಕೂಡಲೇ ಘಟಕ ದುರಸ್ತಿಗೆ ಕ್ರಮ ವಹಿಸಬೇಕು ಎಂಬುದು ಜನರ ಆಗ್ರಹವಾಗಿದೆ.
ದುಬಾರಿ ದರ: ಆರೋಗ್ಯ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನರು ಶುದ್ಧು ನೀರು ಬಳಸುತ್ತಿದ್ದಾರೆ. ಈ ಶುದ್ಧ ನೀರಿನ ಘಟಕ ಕೈಕೊಟ್ಟ ಪರಿಣಾಮವಾಗಿ ₹5 ಬದಲಿಗೆ ₹10 ಕೊಟ್ಟು ಅನಿವಾರ್ಯವಾಗಿ ಶುದ್ಧ ನೀರು ಖರೀದಿ ಮಾಡುತ್ತಿದ್ದಾರೆ.ಕುಡಿಯುವ ನೀರಿಗೆ ತತ್ವಾರ: ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಪಂ ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಇಂತಹ ಪರಿಸ್ಥಿತಿ ಎದುರಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಕಳೆದ ಐದು ದಿನಗಳಿಂದ ಕೇಸೂರು ಗ್ರಾಮದ ಶುದ್ಧ ಕುಡಿಯುವ ನೀರು ಘಟಕ ಕೆಟ್ಟಿರುವ ಪರಿಣಾಮ ತೊಂದರೆಯಾಗುತ್ತಿದೆ. ಗ್ರಾಪಂನವರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಶಿವರಾಜ ದೋಟಿಹಾಳ ಹೇಳಿದರು.ಕೇಸೂರು ಗ್ರಾಮದ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕದ ದುರಸ್ತಿ ಪಿಡಿಒ ಅವರಿಗೆ ಹೇಳಲಾಗಿದ್ದು, ದುರಸ್ತಿಗೊಳಿಸುವುದಾಗಿ ಹೇಳಿದ್ದಾರೆ ಎಂದು ಕೇಸೂರ 2ನೇ ವಾರ್ಡ್ ಗ್ರಾಪಂ ಸದಸ್ಯ ಯಂಕಪ್ಪ ದಾಸರ ಹೇಳಿದರು.ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಬಹಳಷ್ಟು ಸಾಮಗ್ರಿಗಳು ಕೆಟ್ಟಿರುವ ಕಾರಣ ಹುಬ್ಬಳ್ಳಿಯಿಂದ ಮೆಕ್ಯಾನಿಕ್‌ಗಳನ್ನು ಕರೆಯಿಸಿ ಮಾಡಿಸಲಾಗುವುದು ಎಂದು ಕೇಸೂರು ಪಿಡಿಒ ಗಂಗಯ್ಯ ವಸ್ತ್ರದ ಹೇಳಿದರು.