ಕುಂದರಗಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿಗೆ ತತ್ವಾರ

| Published : Apr 04 2024, 01:01 AM IST

ಸಾರಾಂಶ

ರಾಜೀವವಾಡಾದಲ್ಲಿ ಅಳವಡಿಸಲಾದ ೩ ಸೋಲಾರ್ ಬೀದಿದೀಪಗಳೂ ಕೆಟ್ಟಿದ್ದು, ಇಲ್ಲಿ ವಿದ್ಯುತ್ ಕೈಕೊಟ್ಟರೆ ಅಂಧಕಾರವೇ ಗತಿ ಎಂಬಂತಾಗಿದೆ.

ಯಲ್ಲಾಪುರ: ತಾಲೂಕಿನ ಕುಂದರಗಿ ಗ್ರಾಪಂ ವ್ಯಾಪ್ತಿಯ ಗಡಿ ಗ್ರಾಮವಾದ ಉಚಗೇರಿಯ ಮಜ್ಜಿಗೆಹಳ್ಳ ಮತ್ತು ರಾಜೀವವಾಡಾಗಳಲ್ಲಿ ಕುಡಿಯುವ ನೀರಿಗೆ ಇತ್ತೀಚೆಗೆ ತೀವ್ರ ತತ್ವಾರ ಉಂಟಾಗಿದ್ದು; ಇಲ್ಲಿನ ಜನರಿಗೆ ಸಮೃದ್ಧ ನೀರೊದಗಿಸುತ್ತಿದ್ದ ೪ ಕೊಳವೆ ಬಾವಿಗಳು ಸೂಕ್ತ ನಿರ್ವಹಣೆಯಿಲ್ಲದೇ ಕೆಟ್ಟಿವೆ.

ರಾಜೀವವಾಡಾದಲ್ಲಿರುವ ೭೦ ಮನೆಗಳ ಸುಮಾರು ೪೦೦ ಜನರಿಗೆ ಮತ್ತು ಮಜ್ಜಿಗೆಹಳ್ಳದಲ್ಲಿರುವ ೩೦ ಮನೆಗಳ ಸುಮಾರು ೧೫೦ ಜನರಿಗೆ ಪ್ರಸ್ತುತ ಕುಡಿಯುವ ನೀರು ಒದಗಿಸಲೆಂದು ಗ್ರಾಪಂ ೨ ಬೋರ್‌ವೆಲ್‌ಗಳನ್ನು ನಿರ್ಮಿಸಿದ್ದು, ಇಲ್ಲಿರುವ ೪ ನೀರಿನ ಟಾಕಿಗಳಿಗೆ ೧ ಬೋರ್‌ವೆಲ್‌ನಿಂದ ಮತ್ತು ಇರುವ ೧ ಓವರ್‌ಹೆಡ್ ಟ್ಯಾಂಕಿಗೆ ಮತ್ತೊಂದು ಬೋರ್‌ನಿಂದ ನೀರನ್ನು ಬಿಡಲಾಗುತ್ತಿದ್ದು, ಇವುಗಳಲ್ಲಿಯೂ ಇತ್ತೀಚೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಈ ಬೋರ್‌ವೆಲ್‌ಗಳು ಸಂಪೂರ್ಣ ಸ್ಥಗಿತಗೊಂಡರೆ ಇಲ್ಲಿನ ಜನರಿಗೆ ಕುಡಿಯುವ ನೀರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯೂ ಇಲ್ಲ. ಒಬ್ಬಿಬ್ಬರ ಮನೆಯಲ್ಲಿ ಇರಬಹುದಾದ ಬಾವಿಗಳಲ್ಲಿ ಕೂಡಾ ನೀರಿನ ಒರತೆ ಸಂಪೂರ್ಣ ಆರಿದ್ದು, ಸಂಬಂಧಿಸಿದ ಜನಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳು ಇಲ್ಲಿನ ದುಃಸ್ಥಿತಿಯ ಪರಿಹಾರದ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ.

ಗೌಳಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ಎಲ್ಲ ವರ್ಗದ ಮತ್ತು ಸಮುದಾಯದ ಜನರೂ ವಾಸಿಸುತ್ತಿದ್ದು, ಈ ವರ್ಷದ ಬಿರುಬೇಸಿಗೆಯ ಬರಗಾಲದ ಸಂದರ್ಭದಲ್ಲಿ ಅಪಾಯ ಮತ್ತಷ್ಟು ಬಿಗಡಾಯಿಸುವ ಮುನ್ನವೇ ಗ್ರಾಮ ಪಂಚಾಯಿತಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ತುರ್ತಾಗಿ ಕುಡಿಯುವ ನೀರಿಗಾಗಿ ಕ್ರಮ ಕೈಗೊಳ್ಳಬೇಕಿದೆ.

ರಾಜೀವವಾಡಾದಲ್ಲಿ ಅಳವಡಿಸಲಾದ ೩ ಸೋಲಾರ್ ಬೀದಿದೀಪಗಳೂ ಕೆಟ್ಟಿದ್ದು, ಇಲ್ಲಿ ವಿದ್ಯುತ್ ಕೈಕೊಟ್ಟರೆ ಅಂಧಕಾರವೇ ಗತಿ ಎಂಬಂತಾಗಿದೆ.

ಇಲ್ಲಿ ಕೆಟ್ಟಿರುವ ಕೊಳವೆ ಬಾವಿಗಳ ದುರಸ್ತಿ ಕುರಿತಂತೆ ಗ್ರಾಪಂ ಸದಸ್ಯರಾದ ನಿರ್ಮಲಾ ನಾಯ್ಕ, ಮಾಸ್ತ್ಯಪ್ಪ ಮಡಿವಾಳ, ಧಾಕ್ಲು ಪಾಟೀಲ ಅವರನ್ನು ಪ್ರಶ್ನಿಸಿದಾಗ, ಕೊಳವೆ ಬಾವಿಗಳ ದುರಸ್ತಿ ಈ ವರ್ಷ ಅನಿವಾರ್ಯವಾಗಿದ್ದು, ಈ ಕುರಿತು ನಾವು ಗ್ರಾಪಂ ಮೂಲಕ ಸಾಧ್ಯವಿದ್ದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಇದನ್ನು ದುರಸ್ತಿ ಮಾಡುವ ವ್ಯಕ್ತಿಗಳೇ ಸಿಗುತ್ತಿಲ್ಲ. ಆದ್ದರಿಂದ ಈ ಪ್ರಕ್ರಿಯೆ ಕುಂಠಿತಗೊಂಡಿದೆ. ಅಲ್ಲದೇ ಈ ಪ್ರದೇಶಕ್ಕೆ ನೀರೊದಗಿಸಲು ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆ ಮಂಜೂರಾಗಿದ್ದು, ರಾಜೀವವಾಡಾದಲ್ಲಿ ೭೦ ಮನೆಗಳಿಗೆ ಈಗಾಗಲೇ ಸಂಪರ್ಕ ಕಲ್ಪಿಸಲಾಗಿದೆ. ಉಳಿದ ಕಾಮಗಾರಿಯ ಕೆಲಸ ಪ್ರಗತಿಯಲ್ಲಿದೆ ಎಂದರು. ದುರಸ್ತಿಯಾಗಲಿ: ಕೊಳವೆ ಬಾವಿಗಳ ದುರಸ್ತಿ ಕಾರ್ಯ ಶೀಘ್ರ ನಡೆಯಬೇಕು. ಅಲ್ಲದೇ ಜಲಜೀವನ ಮಿಷನ್ ಯೋಜನೆ ಪೂರ್ಣಗೊಂಡರೆ ನಮ್ಮ ಭಾಗದ ನೀರಿನ ತುಟಾಗ್ರತೆ ನೀಗಬಹುದು ಎಂದು ಸಾಮಾಜಿಕ ಕಾರ್ಯಕರ್ತ ರಾಮಾ ಸಿದ್ದಿ ತಿಳಿಸಿದರು.