ಮಿಠಾಯಿ ಅಂಗಡಿಯಲ್ಲಿ ಮೇಳೈಸಿದ ಕನ್ನಡ ನುಡಿ

| Published : Apr 04 2024, 01:01 AM IST

ಸಾರಾಂಶ

ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಕನ್ನಡ ನುಡಿ ಕನಕರಾಯನ ಜಾತ್ರೆಯ ಮಿಠಾಯಿ ಅಂಗಡಿಯಲ್ಲಿ ಮೇಳೈಸಿದೆ.

ಕನಕಗಿರಿ ಜಾತ್ರೆಯಲ್ಲಿ ಮೊಳಗಿದ ಕನ್ನಡ । ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣವಾಗಿ ೫೦ ವರ್ಷ ಪೂರೈಸಿದ ಹಿನ್ನೆಲೆ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಕನ್ನಡ ನುಡಿ ಕನಕರಾಯನ ಜಾತ್ರೆಯ ಮಿಠಾಯಿ ಅಂಗಡಿಯಲ್ಲಿ ಮೇಳೈಸಿದೆ.!

ಬೀರು ಬೇಸಿಗೆ ದಿನಗಳಲ್ಲಿ ನಡೆಯುವ ಕನಕರಾಯನ ಜಾತ್ರೆಯಲ್ಲಿ ಪ್ರತಿ ವರ್ಷವೂ ಒಂದಿಲ್ಲ ಒಂದು ವಿಭಿನ್ನ ಬರಹ, ಘೋಷ ವಾಕ್ಯಗಳು ಹಾಗೂ ವಿವಿಧ ಪೋಸ್ಟರ್‌ ಅಳವಡಿಸುವ ಮೂಲಕ ಈ ಮಿಠಾಯಿ ಅಂಗಡಿಯ ಕುಟುಂಬವೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದೆ.

ಜಾತ್ರೆಯಲ್ಲಿ ಹಾಕಿದ್ದ ಮಿಠಾಯಿ ಅಂಗಡಿಯಲ್ಲಿ ಪಳಾರ, ಕಾರಾ ಹಾಗೂ ಸಿಹಿ ತಿನಿಸುಗಳ ವ್ಯಾಪಾರದ ಜತೆಗೆ ಸಮುದಾಯವನ್ನು ಜಾಗೃತಿಗೊಳಿಸುವ ಉದ್ದೇಶದಿಂದ ಹಲವು ವರ್ಷಗಳಿಂದಲೂ ಸಾಮಾಜಿಕ ಸಂದೇಶ ಸಾರುವ ಕೆಲಸ ನಡೆಯುತ್ತಿದೆ.

ಈ ಹಿಂದೆ ಪರಿಸರ ಸಂರಕ್ಷಣೆ, ಮತದಾನ ಜಾಗೃತಿ, ನವ ಭಾರತ ನಿರ್ಮಾಣ, ಕನಕಗಿರಿಯ ವಿಶಿಷ್ಟ ಸ್ಮಾರಕವಾದ ವೆಂಕಟಪತಿ ಬಾವಿ, ಹಂಪಿಯ ಮಹಾನವಮಿ ದಿಬ್ಬದ ಚಿತ್ರಾವಳಿ ಸೇರಿದಂತೆ ಅನೇಕ ವೈಚಾರಿಕ ವಿಚಾರಗಳು ಜಾತ್ರಾ ಸಂದರ್ಭದ ಮಿಠಾಯಿ ಅಂಗಡಿ ಅರಳಿವೆ.

ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ ೫೦ ವರ್ಷ ಪೂರೈಸಿದ ಸುಸಂದರ್ಭದಲ್ಲಿ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎನ್ನುವ ಕವಿ ಚೆನ್ನವೀರ ಕಣವಿ ಅವರ ನುಡಿ ಅಳವಡಿಸುವ ಮೂಲಕ ಕನ್ನಡಾಭಿಮಾನ ಮೆರದಿದ್ದಾರೆ. ಇನ್ನೂ ಹೊಸ ಟ್ರೆಂಡ್ ಎನಿಸಿರುವ ‘ಈ ಸಲಾ ಕಪ್ ನಮ್ದೆ’ ಎನ್ನುವ ಆರ್‌ಸಿಬಿ ಘೋಷ ವಾಕ್ಯದ ಬರಹ ಅಳವಡಿಸಿರುವುದಕ್ಕೆ ಯುವ ಸಮೂಹ ಹಾಗೂ ಕ್ರಿಕೆಟ್ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ವ್ಯಾಪಾರ ಅಷ್ಟಕಷ್ಟೆ:ಜಾತ್ರೆ ನಿಮಿತ್ತ ಯುಗಾದಿ ಪಾಡ್ಯದವರೆಗೆ ಅಂಗಡಿಗಳ ವ್ಯಾಪಾರ ನಡೆಯಲಿದೆ. ಭೀಕರ ಬರಗಾಲದ ನಡುವೆ ದುಡಿಯಲು ಕೆಲಸ ಇಲ್ಲವಾಗಿದ್ದರಿಂದ ಜನರ ಕೈಯಲ್ಲಿ ದುಡ್ಡಿಲ್ಲವಾಗಿದೆ. ಇದರಿಂದ ಮಿಠಾಯಿ ವ್ಯಾಪಾರ ಅಷ್ಟಕಷ್ಟೆ ಇದೆ. ಜಾತ್ರೆ ಹಾಗೂ ಯುಗಾದಿ ಪಾಡ್ಯದ ದಿನದಂದು ಉತ್ತಮ ವ್ಯಾಪಾರ ಆಗಲಿದೆ.

ಸಚಿವ ತಂಗಡಗಿಗೆ ಹೆಮ್ಮೆ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ತವರು ಕ್ಷೇತ್ರ ಕನಕಗಿರಿಯ ಕನಕರಾಯನ ಜಾತ್ರೆಯಲ್ಲಿ ವರ್ಷವಿಡಿ ಕನ್ನಡ ಸಂಭ್ರಮ ಕಾರ್ಯಕ್ರಮ ಅನಾವರಣಗೊಂಡಿದ್ದು, ಸಚಿವರ ಖುಷಿಗೆ ಇದು ಸಾಕ್ಷಿಯಾದಂತಾಗಿದೆ. ಕನ್ನಡಾಭಿಮಾನಿಗಳು ಹಾಗೂ ಗ್ರಾಹಕರಿಂದಲೂ ಮಿಠಾಯಿ ಅಂಗಡಿಯವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.