ಕನ್ನಡಪ್ರಭ ವಾರ್ತೆ ಕಾಗವಾಡ

ಖಿಳೇಗಾಂವ ಬಸವೇಶ್ವರ(ಕೆಂಪವಾಡ) ಏತ ನೀರಾವರಿ ಹಾಗೂ ಐನಾಪೂರ ಏತ ನೀರಾವರಿ ಯೋಜನೆಗಳ ಕಾಲುವೆಗಳಿಗೆ ಶುಕ್ರವಾರ ಬೆಳಗ್ಗೆ 10ಕ್ಕೆ ಶುಭ ಮೂಹರ್ತದಲ್ಲಿ ಏಕ ಕಾಲಕ್ಕೆ ನೀರು ಹರಿಸಲಾಗುವುದು ಎಂದು ಶಾಸಕ ರಾಜು ಕಾಗೆ ತಿಳಿಸಿದರು.ಪಟ್ಟಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ಮತ್ತು ಜೂನ್ ತಿಂಗಳಲ್ಲಿ ಮಳೆಯಾಗದ್ದರಿಂದ ನದಿಯಲ್ಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಇರಲಿಲ್ಲ. ಇದರಿಂದ ರೈತರ ಬೆಳೆಗಳು ಬತ್ತಿ ಹೋಗಿವೆ. ಕಳೆದ ನಾಲ್ಕಾರು ದಿನಗಳಿಂದ ಮಹಾರಾಷ್ಟ್ರದಲ್ಲಿ ಮರುಣನ ಆರ್ಭಟ ಜೋರಾಗಿರುವದರಿಂದ ಕೃಷ್ಣಾ ನದಿ ತುಂಬಿದೆ. ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶುಕ್ರವಾರ ಎರಡೂ ಕಾಲುವೆಗಳಿಗೆ ನೀರು ಹರಿಸಲಾಗುವುದು. ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಶೇ.80 ರಷ್ಟು ಪೂರ್ಣಗೊಂಡಿದೆ. ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ಆ ಕಾಲುವೆಗೆ ನೀರು ಹರಿಸಲಾಗುವುದು. ಬಾಕಿ ಉಳಿದ ಎರಡನೇ ಹಂತದ ಕಾಮಗಾರಿಯೂ ಕೂಡ ಪ್ರಗತಿಯಲ್ಲಿದೆ. ಬರುವ ಕೆಲವೇ ತಿಂಗಳುಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಮದಭಾವಿ ಹಾಗೂ ಅನಂತಪೂರ ಹೋಬಳಿಗಳಿಗೆ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಐನಾಪುರದ ಹತ್ತಿರ ಕೃಷ್ಣಾ ನದಿಯಿಂದ ನೀರೆತ್ತಿ ಅನಂತಪುರ ಹಾಗೂ ಮದಭಾವಿ ಜಿಪಂ ವ್ಯಾಪ್ತಿಯ 22 ಬರ ಪೀಡಿತ ಗ್ರಾಮಗಳಾದ ಮದಭಾವಿ, ಬೊಮ್ಮನಾಳ, ಜಂಬಗಿ, ಹಣಮಾಪುರ, ಮಸರಗುಪ್ಪಿ, ಇಂಗಳಗಾಂವ, ಅರಳಿಹಟ್ಟಿ, ಕಲ್ಲೂತಿ, ಸಂಬರಗಿ, ಶಿವನೂರ, ಶಿರೂರ, ಪಾಂಡೆಗಾಂವ, ಖಿಳೇಗಾಂವ, ಅಜೂರ, ಅನಂತಪೂರ, ನಾಗನೂರ, ತಾಂವಂಶಿ, ಕಿರಣಗಿ, ಬೇವನೂರ, ಮಲಾಬಾದ, ಬಳ್ಳಿಗೇರಿ, ಗುಂಡೇವಾಡಿ, ಪಾರ್ಥನಳ್ಳಿ ಗ್ರಾಮಗಳ 27,462 ಹೆಕ್ಟೇರ್‌ ಭೂ ಪ್ರದೇಶಕ್ಕೆ ನೀರೊದಗಿಸುವ ಸಮಗ್ರ ನೀರಾವರಿ ಯೋಜನೆ ಇದಾಗಿದೆ ಎಂದರು.ಹಸಿರು ಕ್ರಾಂತಿ ಸಂಕಲ್ಪ

ಕಾಗವಾಡ ಮತಕ್ಷೇತ್ರದ ಉತ್ತರಭಾಗದ ರೈತರ ಬರಡು ಜಮೀನುಗಳಿಗೆ ಶಿಘ್ರವೇ ನೀರು ಹರಿಸಲು ಸರ್ಕಾರ ಎಲ್ಲಾ ಅಗತ್ಯಕ್ರಮಗಳನ್ನು ಕೈಗೊಂಡಿದ್ದು, ಶ್ರೀಘ್ರ ನೀರು ಹರಿಸಲಾಗುವುದು. ಹಲವಾರು ವರ್ಷಗಳಿಂದ ಬರಡಾಗಿರುವ 22 ಹಳ್ಳಿಗಳಿಗೆ ನೀರು ಹರಿಸುವ ಮೂಲಕ ಹಸಿರು ಕ್ರಾಂತಿ ಮಾಡುವ ಸಂಕಲ್ಪ ಹೊಂದಿದ್ದಾಗಿ ಶಾಸಕ ರಾಜು ಕಾಗೆ ತಿಳಿಸಿದರು.