ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೇ ಆಪರೇಷನ್ ಕಮಲ ಶುರುವಾಯಿತು. ವಿಜಯೇಂದ್ರಗೆ ಆಪರೇಷನ್ ಕಮಲದ ವಿಚಾರ ಗೊತ್ತಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.ಕಾಂಗ್ರೆಸ್ ಹಿರಿಯ ಮುಖಂಡರಿಂದಲೇ ಆಪರೇಷನ್ ನಡೆಯುತ್ತಿದೆ. ಸಿದ್ದರಾಮಯ್ಯ ಸುಮ್ಮನೇ ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಮಡಿಕೇರಿಯಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿ ಸುದ್ದಿಗಾರರ ಜತೆ ಮಾತನಾಡಿದರು. ನಮ್ಮ ಶಾಸಕರನ್ನು ಕರೆದೊಯ್ದು ಅವರು ಸರ್ಕಾರ ಮಾಡಿದರು. ಅವರಿಗೆ ಇದೆಲ್ಲಾ ಹೊಸದಲ್ಲ. ಬಿಜೆಪಿಯವರು ಇಲ್ಲಿ ಮಾತ್ರವಲ್ಲ ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಗೋವಾ ಎಲ್ಲೆಡೆ ಇದ್ನನೇ ಮಾಡಿದ್ದಾರೆ. ಅವರು ಅಧಿಕಾರಕ್ಕೆ ಬರುವುದೇ ಈ ರೀತಿ. ನೇರವಾಗಿ ಜನರಿಂದ ಆಯ್ಕೆಯಾಗಿ ಅವರು ಎಲ್ಲಿ ಅಧಿಕಾರಕ್ಕೆ ಬಂದಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹಿರಿಯ ನಾಯಕರೇ ಅಧಿಕಾರಕ್ಕಾಗಿ ಶಾಸಕರ ಖರೀದಿ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷ ಏನು ಅಂತ ನಮಗೆ ಗೊತ್ತಿದೆ. ನಾವು ಎಲ್ಲಾ ಸಚಿವರು, ಶಾಸಕರು ಒಗ್ಗಟ್ಟಾಗಿ ಇದ್ದೇವೆ ಸಿಎಲ್‌ಪಿ ಸಭೆಯಲ್ಲಿ ಎಲ್ಲ ಶಾಸಕರು ಸಿಎಂಗೆ ಬೆಂಬಲ ನೀಡಿದ್ದಾರೆ. ಡಿಸಿಎಂ ಡಿಕೆಶಿ ಅವರೂ ಇದ್ದಾರೆ. ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ. ಇದಕ್ಕಿಂತ ಇನ್ನೇನು ಬೇಕಾಗಿದೆ ? ಎಂದು ಕೇಳಿದರು.ಆಪರೇಷನ್ ಕಮಲ ಮಾಡಲು ತಲಾ 50 ಕೋಟಿ ರು. ಕೊಡುತ್ತಿದ್ದರೆ ಅದಕ್ಕೊಂದು ಎಸ್‌ಐಟಿ ಮಾಡಿ ತನಿಖೆ ಮಾಡಿಸಲಿ ಎಂಬ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ಎಸ್‌ಐಟಿ ಮಾಡಬೇಕೋ ಬೇಡವೋ ಎಂದು ಸರ್ಕಾರ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಹೇಳಿದಂತೆಲ್ಲಾ ಎಸ್‌ಐಟಿ ಮಾಡಲಾಗುವುದಿಲ್ಲ. ನಮ್ಮ ಸರ್ಕಾರ ಇರುವಾಗ ಎಷ್ಟೋ ಕೇಸುಗಳನ್ನು ಸಿಬಿಐಗೆ ಕೊಟ್ಟಿದ್ದೇವೆ. ಆದರೆ ಅವರ ಸರ್ಕಾರದ ಹಗರಣಗಳನ್ನು ಒಂದಾದರೂ ಎಸ್‌ಐಟಿಗೆ ಕೊಟ್ಟಿದ್ದಾರಾ ? ನಾವು ಕೊಟ್ಟ ಕೇಸುಗಳು ವಿಚಾರಣೆ ಆಗಿ ಬಂದಿವೆ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ವಿಚಾರವನ್ನು ಸಿಬಿಐಗೆ ಕೊಟ್ಟಿದ್ದೆವು. ಈ ವಿಷಯದಲ್ಲಿ ಬಿಜೆಪಿಯವರು ಎಷ್ಟು ಗಲಾಟೆ ಮಾಡಿದರು. ಅವರಿಗೆ ಎರಡು ಹೊತ್ತು ಆರೋಪ ಮಾಡುವುದೇ ಕೆಲಸ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಕೋವಿಡ್ ಕಾಲದ ಹಗರಣ ತನಿಖೆ ಎಲ್ಲವೂ ರಾಜಕೀಯ ದ್ವೇಷಕ್ಕಾಗಿ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಎಲ್ಲವನ್ನೂ ರಾಜಕೀಯ ಪ್ರೇರಿತವಾಗಿ ಮಾಡುವುದು ಅವರು. ಈಗ ಮುಡಾ ಕೇಸ್ ರಾಜಕೀಯಕ್ಕಾಗಿ ಮಾಡಿರುವುದು ಕೂಡ ಅವರೇ. ನಾವು ಒಂದು ಆಯೋಗ ರಚಿಸಿ ಜಡ್ಜ್ ವರದಿ ನೀಡಿದ್ದಾರೆ. ವರದಿ ಮೇಲೆ ತನಿಖೆ ನಡೆಯುತ್ತದೆ. ಅದರ ಆಧಾರದ ಮೇಲೆ ಈಗ ಕೋರ್ಟಿಗೆ ಸಲ್ಲಿಸಲಾಗುತ್ತದೆ. ಅಲ್ಲಿ ಹೋಗಿ ಚಾಲೆಂಜ್ ಮಾಡಲಿ. ಯಾರಾದರೂ ಭ್ರಷ್ಟಾಚಾರ ಮಾಡಿದ್ದಾರೆ ಕ್ರಮ ಆಗುತ್ತದೆ ಎಂದರು.ವಕ್ಫ್ ಬೋರ್ಡ್ ಆಸ್ತಿ ವಿಷಯ ಆಯ್ತು ಈಗ ಖಬರಸ್ಥಾನದ ಹೆಸರಿನಲ್ಲಿ ಜಾಗ ಕೊಡಲು ಹೊರಟಿದ್ದಾರೆ. ಹೀಗೆ ಆದರೆ ಕಾಂಗ್ರೆಸ್ ನಾಯಕರಿಗೆ ಜನರು ಓಡಾಡಿಸಿಕೊಂಡು ಹೊಡೆಯುತ್ತಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಜಾರ್ಜ್ ಖಬರಸ್ಥಾನ ಆಗಿರಬಹುದು ಇನ್ನೊಂದಕ್ಕೆ ಆಗಿರಬಹುದು
ಮೊದಲಿನಿಂದ ಸರ್ಕಾರಗಳು ಜಾಗ ಕೊಡುತ್ತಲೇ ಬಂದಿವೆ. ಹಾಗೆ ಈಗಲೂ ಕೊಡುತ್ತಿದ್ದೇವೆ. ಅದೆಲ್ಲಾ ದೊಡ್ಡ ವಿಷಯವೇ ಅಲ್ಲ. ನಾವೆಲ್ಲಾ ಭಾರತೀಯರು ಎನ್ನುತ್ತೇವೆ ಆದರೆ ಜಾತಿಯೇಕೆ ತರುವುದು ? ಬಿಜೆಯವರಿಗೆ ಸುಮ್ಮನೆ ಇರಲಾಗದೆ ಅವರಿಗೆಲ್ಲಾ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಈಶ್ವರಪ್ಪ ಯಾವ ಪಾರ್ಟಿಯಲ್ಲಿ ಇದ್ದಾರೆ ಈಗ. ಅವರನ್ನು ಬಿಜೆಪಿಯಿಂದ ಓಡಿಸಿದ್ದಾರೆ ಎಂದು ಹೇಳಿದರು.ಎಚ್‌ಡಿ ಕೋಟೆ ವ್ಯಾಪ್ತಿಯಲ್ಲಿರುವ ತಮ್ಮ ಜಮೀನಿಗೆ ಓಡಾಡಲು ನುಗು ಅರಣ್ಯದಲ್ಲಿ ಅವಕಾಶ ಕಲ್ಪಿಸುವಂತೆ ರಾಣಾ ಜಾರ್ಜ್ ಕೋರ್ಟ್ ಮೊರೆ ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ಸರ್ಕಾರ ವಿರುದ್ಧ ಕೋರ್ಟಿಗೆ ಹೋಗಿರುವುದಲ್ಲ. ಅವರವರ ಹಕ್ಕನ್ನು ಪಡೆಯಲು ಕೋರ್ಟಿನಲ್ಲಿ ಕೇಳಿದ್ದಾರೆ. ನಾನು ಮಿನಿಸ್ಟರ್ ಆಗಿ ಅದಕ್ಕೆ ಪರ್ಮಿಷನ್ ಕೊಟ್ಟಿದ್ದರೆ ನನ್ನ ಅಧಿಕಾರ ದುರುಪಯೋಗ ಅಂತ ಹೇಳುತ್ತಿದ್ದರು. ನನ್ನ ಮಗ ಅವರ ಹಕ್ಕಿನ ಪ್ರಕಾರ ಕೋರ್ಟಿನಲ್ಲಿ ಕೇಳಿದ್ದಾರೆ. ಕೋರ್ಟಿನಲ್ಲಿ ಇರುವುದರಿಂದ ನಾನು ಅದರ ಬಗ್ಗೆ ಚರ್ಚಿಸುವುದಿಲ್ಲ. ಸಚಿವನಾಗಿದ್ರೂ ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ
ಕೋರ್ಟಿನಲ್ಲಿ ಏನೇ ತೀರ್ಮಾನ ಆದರೂ ಅದಕ್ಕೆ ಎಲ್ಲರೂ ತಲೆಬಾಗಬೇಕು ಎಂದು ಹೇಳಿದರು.ಈ ಸಂದರ್ಭ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಮತ್ತಿತರರು ಇದ್ದರು.