ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾಜನ ಆಯೋಗದ ಕಾಲದಲ್ಲಿ ನನ್ನ ತಂದೆ ನೂರುದ್ದೀನ್ ಅವರು ಬೆಳಗಾವಿ ಕರ್ನಾಟಕದಲ್ಲಿಯೇ ಉಳಿಯಬೇಕೆಂದು ನಡೆದ ಹೋರಾಟದಲ್ಲಿ ಭಾಗವಹಿಸಿದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಹೀಗಾಗಿ ಬೆಳಗಾವಿ, ಕನ್ನಡ ಹಾಗೂ ಕರ್ನಾಟಕದ ಹಿತಾಸಕ್ತಿಗಳ ಬಗ್ಗೆ ನನಗೂ ವಿಶೇಷ ಬದ್ಧತೆ ಇದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ ಸೇಠ್ ಹೇಳಿದರು.

ಮಂಗಳವಾರ ತಮ್ಮನ್ನು ಭೇಟಿಯಾದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ತಾವೇ ಮಂಡಿಸುವುದಾಗಿ ಸ್ಪಷ್ಟಪಡಿಸಿದರು. ಈ ಮೂಲಕ ಬೆಳಗಾವಿಯ ಬಗ್ಗೆ ತಮ್ಮ ನಿಲುವನ್ನು ಮತ್ತೊಮ್ಮೆ ಬಹಿರಂಗವಾಗಿ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಮಂಡಿಸಲು ಸಿದ್ಧನಿರುವುದಾಗಿ ಆಸಿಫ್ ಸೇಠ್ ಘೋಷಿಸಿದ್ದರು. ಈ ಘೋಷಣೆಯನ್ನು ಕನ್ನಡ ಸಂಘಟನೆಗಳು ಸ್ವಾಗತಿಸಿದ್ದು, ಅವರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದವು.ಈ ಸಂದರ್ಭದಲ್ಲಿ ಮಾತನಾಡಿದ ಆಸಿಫ್ ಸೇಠ್, ಬೆಳಗಾವಿ ವಿಚಾರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ನಗರವು ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಈ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳುವುದು ಅಗತ್ಯವಾಗಿದೆ. ಕರ್ನಾಟಕದ ಏಕತೆ ಮತ್ತು ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಎಲ್ಲ ಜನಪ್ರತಿನಿಧಿಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಗೊತ್ತುವಳಿ ಅಂಗೀಕಾರಕ್ಕೆ ಅಗತ್ಯ ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಈ ಸಂಬಂಧ ಸರ್ವಸಾಧಾರಣ ಸಭೆಯನ್ನು ಕರೆಯುವಂತೆ ಮಹಾಪೌರರಿಗೆ ಪತ್ರ ಬರೆಯಲಾಗುವುದು. ಸಭೆಯಲ್ಲಿ ಗೊತ್ತುವಳಿ ಮಂಡಿಸಿ ಅಂಗೀಕಾರಗೊಳಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಕನ್ನಡ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು.ಕಳೆದ 75 ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಿವೆ. ವಿವಿಧ ಪ್ರತಿಭಟನೆಗಳು, ಧರಣಿಗಳು, ಮನವಿಗಳು ಹಾಗೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಸರ್ಕಾರ ಮತ್ತು ಪಾಲಿಕೆಯ ಗಮನ ಸೆಳೆಯಲು ಸಂಘಟನೆಗಳು ಪ್ರಯತ್ನಿಸುತ್ತಿವೆ. ಆಸಿಫ್ ಸೇಠ್ ಅವರ ಘೋಷಣೆಯನ್ನು ಕನ್ನಡ ಸಂಘಟನೆಗಳು ಮಹತ್ವದ ಬೆಳವಣಿಗೆಯೆಂದು ಪರಿಗಣಿಸಿದ್ದು, ಇದೀಗ ಪಾಲಿಕೆಯ ಸರ್ವಸಾಧಾರಣ ಸಭೆ ಶೀಘ್ರದಲ್ಲೇ ನಡೆಯಬೇಕು ಹಾಗೂ ಕರ್ನಾಟಕ ಪರ ಗೊತ್ತುವಳಿ ಸರ್ವಾನುಮತದಿಂದ ಅಂಗೀಕಾರವಾಗಬೇಕು ಎಂದು ಆಗ್ರಹಿಸಿವೆ. ನಿರ್ಣಯ ಅಂಗೀಕಾರವಾದರೆ ಕಳೆದ ಎರಡೂವರೆ ತಿಂಗಳಿನಿಂದ ನಡೆಯುತ್ತಿರುವ ಹೋರಾಟಕ್ಕೆ ನ್ಯಾಯ ಸಿಗಲಿದ್ದು, ಕನ್ನಡಿಗರ ಬಹುಕಾಲದ ಬೇಡಿಕೆ ಈಡೇರುವಂತಾಗಲಿದೆ ಎಂಬ ವಿಶ್ವಾಸವನ್ನು ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದಾರೆ.ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸದಲ್ಲಿ ಈ ಬೆಳವಣಿಗೆ ಮಹತ್ವದ ಘಟ್ಟವಾಗಿದ್ದು, ಈಗ ಎಲ್ಲರ ಗಮನ ಮಹಾನಗರ ಪಾಲಿಕೆಯ ಮುಂದಿನ ಸರ್ವಸಾಧಾರಣ ಸಭೆಯತ್ತ ನೆಟ್ಟಿದೆ. ಅಲ್ಲಿ ಕೈಗೊಳ್ಳುವ ನಿರ್ಣಯ ಬೆಳಗಾವಿಯ ರಾಜಕೀಯ ಹಾಗೂ ಗಡಿ ಹೋರಾಟದ ಚರ್ಚೆಗಳಿಗೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮೊದಲಾದವರು ಉಪಸ್ಥಿತರಿದ್ದರು.