ಬ್ಯಾಡಗಿ: ಸತ್ಯ, ನ್ಯಾಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಾವು ಬದುಕಬೇಕು, ಧರ್ಮ ಕೇಂದ್ರ, ದೇವಸ್ಥಾನಗಳಲ್ಲಿ ಭಕ್ತರಿಗೆ ಭಕ್ತಿಯ ಭಾವನೆ ಬರಲಿದ್ದು, ಎಲ್ಲರೂ ಸಹೋದರತೆ ಬಾಳ್ವೆ ಮೈಗೂಡಿಸಿಕೊಳ್ಳಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲೂಕಿನ ಘಾಳಪೂಜಿ ಗ್ರಾಮದ ಶ್ರೀ ವೀರಮಾರುತಿ ದೇವಸ್ಥಾನ ಕಟ್ಟಡದ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ‍್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಗ್ರಾಮದ ನೂತನ ವೀರ ಮಾರುತಿ ದೇವಸ್ಥಾನ ನೋಡುತ್ತಿದ್ದಂತೆ ಜಕಣಾಚಾರ್ಯರು ನಿರ್ಮಿಸಿದ ಶಿಲ್ಪಕಲೆಯ ಅದ್ಭುತ ಕಲಾವಿದರ ಕೈಚಳಕ ದೇವಾಲಯದಂತೆ ಭಾಸವಾಗುತ್ತಿದೆ. ಅತ್ಯಂತ ಭಕ್ತಿ ಭಾವ ತುಂಬಿ ತುಳುಕುವಂತ ಮಂದಿರ ನಿರ್ಮಾ ಣವಾಗಿದೆ. ಮಾರುತಿ ಸಂಕಟ ನಿವಾರಕ, ದುಃಖ ನಿವಾರಣೆ ಮಾಡುವ ಶಕ್ತಿ ಮಾರುತಿ ದೇವರಿಗಿದೆ ಎಂದರು. ಮಾರುತಿ ದೇವರ ಪ್ರಾಮುಖ್ಯತೆಗೆ ಮುಖ್ಯ ಕಾರಣ, ತ್ರೇತ್ರಾಯುಗ, ದ್ವಾಪರಯುಗ, ಸತ್ಯಯುಗ, ಕಲಿಯುಗ ಈ ನಾಲ್ಕೂ ಯುಗದಲ್ಲಿಯೂ ನಿರಂತರವಾಗಿ ಜೀವಂತವಾಗಿರುವ ದೇವರಾಗಿದ್ದಾರೆ. ರಾಮ, ಕೃಷ್ಣ ಒಂದು ಯುಗದಾಟಲಿಲ್ಲ ಆದರೆ ಮಾರುತಿ ಎಲ್ಲ ಯುಗದಲ್ಲಿ ಜೀವಂತ ಇರುತ್ತಾನೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ಗಣೇಶ, ಮಾರುತಿ ದೇವರನ್ನು ಎಲ್ಲರೂ ಆರಾಧಿಸುತ್ತಾರೆ. ಸಣ್ಣ ಗ್ರಾಮದಲ್ಲಿ ದೊಡ್ಡದಾದ ದೇವಸ್ಥಾನ ನಿರ್ಮಿಸುವ ಸಂಕಲ್ಪ ಎಲ್ಲರ ಮನಸ್ಸಿನಲ್ಲಿ ಮೂಡಿ ಬರಲು ಇಂತಹ ಸತ್ಕಾರ್ಯಕ್ಕೆ ಮಾರುತಿ ದೇವರ ಅನುಗ್ರಹವಾಗಿದೆ. ಗ್ರಾಮಸ್ಥರ ಹಾಗೂ ಮಹಾದಾನಿಗಳ ಹೃದಯ ವೈಶಾಲ್ಯತೆಯಿಂದ ಅದ್ಭುತ ಕಾರ್ಯಗಳು ನಡೆಯಲು ಸಾಧ್ಯವಾಗಲಿದೆ. ಶಾಸ್ತ್ರೋಸ್ತಕ್ತವಾಗಿ ಭವ್ಯಮಂದಿರದಲ್ಲಿ ಪೂಜಾ ಕೈಂಕರ‍್ಯಗಳು ನಡೆಯಬೇಕಿದ್ದು, ಎಲ್ಲರೂ ಭಕ್ತಿ ಭಾವದಿಂದ ಸೇರೋಣ, ಎಲ್ಲಿ ಸತ್ಯಧರ್ಮ ನ್ಯಾಯ ಇರುತ್ತದೆಯೋ ಅಂತಹ ಜಾಗೆಯಲ್ಲಿ ಇಂತಹ ದೇವ ಸ್ಥಾನಗಳು ನಿರ್ಮಾಣವಾಗಲಿವೆ.ನಾವು ಉನ್ನತ ಶಿಕ್ಷಣ ಪಡೆದರೂ ದರೋಡೆ, ಕೊಲೆ, ಸುಲಿಗೆ, ದುರಾಚಾರಗಳಲ್ಲಿ ತೊಡಗಿರುವುದು ದುರದೃಷ್ಟಕರವಾಗಿದೆ. ನಮಗೆ ಧರ್ಮ ಸಂಸ್ಕೃತಿ, ಸಂಸ್ಕಾರದ ಕೊರತೆ ಇಲ್ಲವಾಗಿದೆ. ಶಾಂತಿ ಕೊರತೆಯಿಂದ ಮಾನಸಿಕ ತೊಳಲಾಟ ತೀವ್ರವಾಗಿದ್ದು, ಧರ್ಮ ನೀತಿಗಳಿಗೆ ಆದ್ಯತೆ ನೀಡಬೇಕಿದೆ. ಪ್ರತಿದಿನ ದೈವಸ್ಮರಣೆ, ದೈವಾರಾಧನೆ, ದೇವ ಮಂದಿರಗಳಿಗೆ ಭೇಟಿ ನೀಡುವುದು ಮನುಷ್ಯನ ಸಾತ್ವಿಕತೆ ಹೆಚ್ಚಿಸಲಿದೆ. ಪ್ರತಿ ಶನಿವಾರ ಊರಿನ ಎಲ್ಲರೂ ಭಕ್ತಿಯಿಂದ ಆರಾಧನೆ ಮಾಡುವ ಮೂಲಕ ಸಾಮೂಹಿಕ ಪ್ರಾರ್ಥನೆ ಮೂಲಕ ಒಳ್ಳೆಯ ಸಂಕಲ್ಪ ಮಾಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಬಿಜೆಪಿ ತಾಲೂಕಾದ್ಯಕ್ಷ ನಿಂಗಪ್ಪ ಬಟ್ಟಲಕಟ್ಟೆ, ವಿನಯಕುಮಾರ ಹಿರೇಮಠ, ಟ್ರಸ್ಟಕಮೀಟಿಅಧ್ಯಕ್ಷ ಹನುಮಂತಪ್ಪ ಹಂಚಿನಗೌಡ್ರ ಸೇರಿದಂತೆಗ್ರಾಮದ ಹಿರಿಯರು ಹಾಗೂ ಭಕ್ತರಿದ್ದರು.