ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಹುಲಿ ಗೆಳೆಯರ ಬಳಗದಿಂದ ರಾಜ್ಯ ಮಟ್ಟದ ಪ್ರಥಮ ವರ್ಷದ ಚಕ್ಕಡಿ ಗಾಡಿ ಜೋಡಿ ಕರುಗಳ ಓಟದ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಜೋಡಿ ಕರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಮಂಗಲ ಗ್ರಾಮದಲ್ಲಿ ಹುಲಿ ಗೆಳೆಯರ ಬಳಗದಿಂದ ರಾಜ್ಯ ಮಟ್ಟದ ಪ್ರಥಮ ವರ್ಷದ ಚಕ್ಕಡಿ ಗಾಡಿ ಜೋಡಿ ಕರುಗಳ ಓಟದ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ನೂರಕ್ಕೂ ಹೆಚ್ಚು ಜೋಡಿ ಕರುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ಚಕ್ಕಡಿ ಗಾಡಿ ಜೋಡಿ ಕರುಗಳ ಓಟದ ಸ್ಪರ್ಧೆ ರೋಚಕವಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಜೋಡಿ ಕರುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಒಂದಕ್ಕಿಂತ ಒಂದು ಕಡಿಮೆ ಇಲ್ಲದಂತೆ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಗ್ರಾಮದ ಹೊರ ವಲಯದ ಜಮೀನಿನಲ್ಲಿ ಆಯೋಜಿಸಿದ್ದ ಜೋಡಿ ಕರುಗಳ ಓಟದ ಸ್ಪರ್ಧೆಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಭಾರೀ ಸಂಖ್ಯೆಯಲ್ಲಿ ನೆರೆದಿದ್ದರು. ಎರಡು ಟ್ರಾಕ್‌ನಲ್ಲಿ ಆಯೋಜಿಸಲಾಗಿದ್ದ ಜೋಡಿ ಕರುಗಳ ಓಟದ ಸ್ಪರ್ಧೆಯಲ್ಲಿ ಕರುಗಳು ಪೈಪೋಟಿಗೆ ಬಿದ್ದಿದ್ದವು. ಚಕ್ಕಡಿ ಗಾಡಿಯ ಸಾರಥಿಯಾಗಿದ್ದವರೂ ಸಹ ಅಷ್ಟೇ ಪ್ರಮಾಣದಲ್ಲಿ ತಮ್ಮ ಕಸರತ್ತನ್ನು ಹಾಕುತ್ತಿದ್ದರು. ನೋಡುತ್ತಿದ್ದ ಪ್ರೇಕ್ಷಕರು ಓಡು, ಓಡು ಎಂದು ಹುರಿದುಂಬಿಸುತ್ತಾ ಓಟಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತಿದ್ದುದು ಕಂಡುಬಂದಿತು.
ಪ್ರಾಣವನ್ನೂ ಪಣಕ್ಕಿಟ್ಟು ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಜೋಡಿ ಕರುಗಳು ಮತ್ತು ಓಡಿಸುವವರು, ಜನರ ಕರತಾಡನ ಮತ್ತು ಶಿಳ್ಳೆಯಿಂದ ಮತ್ತಷ್ಟು ಪ್ರಚೋದಿತರಾಗಿ ವೇಗವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು.ಚಕ್ಕಡಿ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದ ಎಪಿಎಂಸಿ ಮಾಜಿ ಅಧ್ಯಕ್ಷೆ ಪಲ್ಲವಿ ಮಾತನಾಡಿ, ಗ್ರಾಮೀಣ ಜನರ ಹಿತ ಕಾಯುವ ಜೋಡೆತ್ತುಗಳು ಸಾಮಾಜಿಕ ಜವಾಬ್ದಾರಿಯ ಜೊತೆಗೆ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಎತ್ತಿನ ಗಾಡಿ ಓಟದ ಸ್ಪರ್ಧೆಯು ಕಠಿಣವಾಗಿದ್ದು, ಯಾವುದೇ ಅವಘಡಗಳು ಸಂಭವಿಸದ ಹಾಗೆ ಸ್ಪರ್ಧೆಯು ಜರುಗಲಿ ಎಂದು ಆಶಿಸಿದರು.
ರೈತರು, ಯುವಜನರಲ್ಲಿ ಸ್ವಾಭಿಮಾನ ಮತ್ತು ಸ್ವಯಂ ಜೀವನ ರೂಪಿಸುಕೊಳ್ಳುವಂತಹ ಮನೋಭಾವ ಬೆಳೆಯಬೇಕು. ಕೃಷಿಯನ್ನು ಲಾಭದಾಯಕ ಮಾಡಿಕೊಂಡು ಆರ್ಥಿಕ ಸದೃಢತೆಯನ್ನು ಕಾಣುವಂತೆ ರೈತರಿಗೆ ತಿಳಿಸಿದರು.ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಯೋಗೀಶ್ ಮಾತನಾಡಿ, ರೈತರ ಆದಾಯೋತ್ಪನ್ನ ಚಟುವಟಿಕೆಗಳಿಗೆ ಎತ್ತಿನ ಕರುಗಳು ತುಂಬಾ ಮುಖ್ಯವಾಗಿದ್ದು, ಆಧುನಿಕ ಯಂತ್ರೋಪಕರಣಗಳು ಬರುವ ಮುನ್ನ ಎತ್ತುಗಳು ರೈತನ ಜೀವನಾಡಿಯಾಗಿದ್ದವು. ಪ್ರತಿನಿತ್ಯದ ರೈತನ ದಿನಚರಿಗೆ ರಾಸುಗಳು ಉತ್ತಮ ಸ್ನೇಹಿಯಾಗಿರುತ್ತವೆ. ಆಧುನಿಕ ಕೃಷಿ ಪದ್ಧತಿಯ ಅಳವಡಿಕೆಯಿಂದ ಗ್ರಾಮೀಣ ಜನರಲ್ಲಿ ಎತ್ತುಗಳ ಸಾಕಾಣಿಕೆ ಕ್ಷೀಣಿಸಿರುವುದು ವಿಷಾದನೀಯ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಕೆ. ಮಧು ಜೋಡೆತ್ತುಗಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮೀಣ ಯುವಜನರಲ್ಲಿ ಸಂಘಟನಾ ಮನೋಭಾವ ಬೆಳೆಯುವಲ್ಲಿ ಈ ರೀತಿಯ ಸ್ಪರ್ಧೆಗಳು ಉತ್ತಮವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಆರೋಗ್ಯಕರ ರೀತಿಯಲ್ಲಿ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಜೆ. ಗಿರೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜಗದೀಶ್, ಅನಿಲ್, ಹುಲಿ ಗೆಳೆಯರ ಬಳಗದ ಮುಖ್ಯಸ್ಥ ಮೋಹನ್, ಪದಾಧಿಕಾರಿಗಳಾದ ಶಶಾಂಕ, ಕಿರಣ್, ಮಹೇಂದ್ರ, ಸುಖೀ, ಪವನ್, ಪ್ರಸನ್ನ ಇತರರಿದ್ದರು.