ಬಂಧಿತರಾದ 4 ಆರೋಪಿಗಳೂ ಭದ್ರಾವತಿ ತಾಲೂಕಿನ ಆಗರದಹಳ್ಳಿಯವರಾಗಿದ್ದಾರೆ. ಎಲ್ಲರೂ ಕೂಲಿ ಕೆಲಸ ಮಾಡುತ್ತಿದ್ದು, 27 ವರ್ಷದ ವೀರೇಶ್, 24 ವರ್ಷದ ಮಹೇಶ್, 22 ವರ್ಷದ ಕಾರ್ತೀಕ್, 23 ವರ್ಷದ ಶ್ರೀಹರಿ ಅವರನ್ನು ಬಂಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಡಿಸೆಂಬರ್ 12 ರಂದು ತಾಲೂಕಿನ ಅಳೇಹಳ್ಳಿ ಸಮೀಪ ಪಿಕಪ್ ವಾಹನವನ್ನು ಅಡ್ಡ ಗಟ್ಟಿದ್ದ ದರೋಡೆಕೋರರ ಗುಂಪು 67 ಚೀಲ ಹಸಿ ಅಡಿಕೆ ಮೂಟೆಗಳನ್ನು ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಭದ್ರಾವತಿ ತಾಲೂಕಿನ 4 ಆರೋಪಿಗಳನ್ನು ಬಂಧಿಸಿ ಅಡಿಕೆ ಮೂಟೆ, ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.ಘಟನಾ ಹಿನ್ನೆಲೆ:
ಡಿಸೆಂಬರ್ 12ರಂದು ರವಿ ಹಾಗೂ ಚಾಲಕ ವಿಶ್ವಾಸ್ ಕಳಸದ ಅಡಿಕೆ ತೋಟದ ಮಾಲೀಕರಿಂದ ಹಸಿ ಅಡಿಕೆಯನ್ನು ಖರೀದಿ ಮಾಡಿ ಪಿಕಪ್ ವಾಹನದಲ್ಲಿ ಭದ್ರಾವತಿಗೆ ಮಾರಾಟ ಮಾಡಲು ರಾತ್ರಿ 10-30 ಗಂಟೆಯ ಸುಮಾರಿಗೆ ನರಸಿಂಹರಾಜಪುರದ ಕಡೆಗೆ ಬರುತ್ತಿದ್ದಾಗ ಮೂಡಬಾಗಿಲು ಸಮೀಪ ಇನ್ನೊಂದು ಪಿಕಪ್ ವಾಹನ ಹಾಗೂ ಬೈಕ್ ನಲ್ಲಿ ಬಂದ 4 ಆರೋಪಿಗಳ ಗುಂಪು ಮಾರಕಾಸ್ಟ್ರದಿಂದ ರವಿ ಮೇಲೆ ಹಲ್ಲೆ ಮಾಡಿದ್ದರು. ನಂತರ ಬಿ.ಎಚ್.ಕೈಮರ- ಕುದುರೆಗುಂಡಿ ರಸ್ತೆಯ ಮಧ್ಯ ಕಾಡಿನ ಸಮೀಪದವರೆಗೆ ಬಲತ್ಕಾರವಾಗಿ ಹಸಿ ಅಡಿಕೆ ತುಂಬಿದ್ದ ಪಿಕಪ್ ವಾಹನವನ್ನು ತಂದಿದ್ದರು. ನಂತರ 44 ಕ್ವಿಂಟಾಲ್ ಇದ್ದ 67 ಚೀಲ ಹಸಿ ಅಡಿಕೆ ಮೂಟೆ, 29 ಸಾವಿರ ರುಪಾಯಿ ನಗದು, 2 ಮೊಬೈಲ್ ದರೋಡೆ ಮಾಡಿ ಪರಾರಿಯಾಗಿದ್ದರು.ದರೋಡೆ ಪ್ರಕರಣದಲ್ಲಿ ಖದೀಮರನ್ನು ಬಂಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಪೊಲೀಸ್ ತಂಡ ರಚಿಸಿದ್ದರು. ಎನ್.ಆರ್.ಪುರ ವೃತ್ತ ನಿರೀಕ್ಷಿಕ ಗುರುದತ್ ಕಾಮತ್, ಎನ್.ಆರ್.ಪುರ ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ, ಅಪರಾಧ ವಿಭಾಗದ ಪಿ.ಎಸ್.ಐ. ಜ್ಯೋತಿ ಹಾಗೂ ಸಿಬ್ಬಂದಿ ಮಧು, ಎಸ್.ಜಿ.ಸೋಮೇಶ್, ಯುಗಾಂಧರ, ಬಿನು, ಅಮಿತ್ ಚೌಗಲೆ, ದೇವರಾಜ, ರೇವಗೊಂಡ ಅರಾಧರ, ಮನು, ಮುರುಗೇಶ, ಚಂದ್ರಕಾಂತ ಪೂಜಾರಿ, ಸ್ವರೂಪ್ ಹಾಗೂ ಜಿಲ್ಲಾ ತಾಂತ್ರಿಕ ವಿಬಾಗ ಸಿಬ್ಬಂದಿ ನಯಾಜ್ ಅಂಜುಂ, ರಸ್ತಾನಿ ಸೇರಿ ತಂಡವನ್ನು ರಚಿಸಿದ್ದರು. ಪೊಲೀಸರ ತಂಡವು ಸಿ.ಸಿ.ಟಿ.ವಿ.ಕ್ಯಾಮೆರಾ ಸೇರಿದಂತೆ ಎಲ್ಲಾ ಆಯಾಮದಲ್ಲೂ ತನಿಖೆ ಮಾಡಿ 8 ದಿನದ ಒಳಗೆ ಡಕಾಯಿತಿ ತಂಡವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರಾದ 4 ಆರೋಪಿಗಳೂ ಭದ್ರಾವತಿ ತಾಲೂಕಿನ ಆಗರದಹಳ್ಳಿಯವರಾಗಿದ್ದಾರೆ. ಎಲ್ಲರೂ ಕೂಲಿ ಕೆಲಸ ಮಾಡುತ್ತಿದ್ದು, 27 ವರ್ಷದ ವೀರೇಶ್, 24 ವರ್ಷದ ಮಹೇಶ್, 22 ವರ್ಷದ ಕಾರ್ತೀಕ್, 23 ವರ್ಷದ ಶ್ರೀಹರಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2.56 ಲಕ್ಷ ರುಪಾಯಿ ಮೌಲ್ಯದ 44 ಕ್ವಿಂಟಾಲ್ ಹಸಿ ಅಡಿಕೆ, ಪಿಕಪ್ ವಾಹನ, ಬೈಕ್ ವಶಪಡಿಸಿಕೊಳ್ಳಲಾಗಿದೆ. ಡಕಾಯತಿ ಪ್ರಕರಣವನ್ನು ಯಶಸ್ವಿಯಾಗಿ ಬೇಧಿಸಿದ ಎನ್.ಆರ್.ಪುರ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.