ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಪಂ ಡಿಜಿಟಲ್ ಗ್ರಂಥಾಲಯದ ಟಿವಿ ಎಲ್ಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಕುರಿತು ಗ್ರಾಪಂ ಅಧ್ಯಕ್ಷರು ತಾಪಂಗೆ ಪತ್ರ ಬರೆದಿದ್ದಾರೆ. ತಾಪಂನಿಂದ ಜಿಪಂಗೆ ಮಾಹಿತಿ ಕೇಳಿ ಪತ್ರ ಬರೆಯಲಾಗಿದೆ.
ಕುಕನೂರು: ತಾಲೂಕಿನ ಬನ್ನಿಕೊಪ್ಪ ಗ್ರಾಪಂ ಡಿಜಿಟಲ್ ಗ್ರಂಥಾಲಯಕ್ಕೆ 55 ಇಂಚಿನ ಟಿವಿ ಪೂರೈಸಿಲ್ಲ, ಪೂರೈಸಿದ್ದರೆ ಮಾಹಿತಿ ನೀಡಿ ಎಂದು ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪುರ ತಾಪಂ ಅಧಿಕಾರಿಗಳಿಗೆ ಇತ್ತೀಚೆಗೆ ಪತ್ರ ಬರೆದಿದ್ದರು. ಸದ್ಯ ತಾಪಂ ಅವರು ಮಾಹಿತಿ ಕೇಳಿ ಜಿಪಂಗೆ ಪತ್ರ ಬರೆದಿದ್ದು, ಟಿವಿಯನ್ನು ಅಧಿಕಾರಿಗಳು ಕದ್ದಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಈ ವಿಷಯ ಬಹಳ ಚರ್ಚೆ ಸಹ ಆಗುತ್ತಿದೆ.
ಬನ್ನಿಕೊಪ್ಪ ಗ್ರಾಪಂ ಗ್ರಂಥಾಲಯಕ್ಕೆ 2023-24ನೇ ಸಾಲಿನಲ್ಲಿ ತಾಲೂಕು ಪಂಚಾಯತಿಯಿಂದ ನೀಡಲಾದ ಸ್ಮಾರ್ಟ್ ಟಿವಿ ಎಲ್ಲಿಗೆ ಹೋಯಿತು? ಎಂದು ಗ್ರಾಪಂ ಅಧ್ಯಕ್ಷರು ತಾಪಂಗೆ ಪತ್ರ ಬರೆದಿದ್ದರು.ಬನ್ನಿಕೊಪ್ಪ ಗ್ರಂಥಾಲಯಕ್ಕೆ ಟಿವಿ ಪೂರೈಸಿದ್ದರೆ, ಆ ಅವಧಿಯಲ್ಲಿ ಇದ್ದ ಪಿಡಿಒ ವಿಚಾರಿಸಿ ಟಿವಿಯನ್ನು ಬನ್ನಿಕೊಪ್ಪ ಗ್ರಂಥಾಲಯಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಡಬೇಕು ಎಂದು ನಾಗರಾಜ ವೆಂಕಟಾಪುರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಗ್ರಾಪಂ ಅಧಿಕಾರಿಗಳು ಟಿವಿಯನ್ನು ಅವರೇ ತೆಗೆದುಕೊಂಡಿದ್ದಾರೆಯೇ ಎಂಬ ಅನುಮಾನ ಮೂಡಿದೆ.
ಸದ್ಯ ಟಿವಿ ಬಗ್ಗೆ ತಾಪಂ ಅವರು ಜಿಪಂ ಅವರಿಗೆ ಪತ್ರ ಬರೆದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಟಿವಿ ಎಲ್ಲಿದೆ? ಅದನ್ನು ಬಳಕೆ ಮಾಡಿಕೊಂಡು ವೀಕ್ಷಣೆ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿವೆ.ಗ್ರಂಥಾಲಯ ಅಭಿವೃದ್ಧಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಗ್ರಂಥಾಲಯಕ್ಕೆ ಟಿವಿ ನೀಡಲಾಗಿದೆ.ಆದರೆ ಗ್ರಂಥಾಲಯದಲ್ಲಿ ಟಿವಿ ಇಲ್ಲದಿರುವುದು ಬೇಸರದ ಸಂಗತಿ.ಸೂಕ್ತ ತನಿಖೆ ಆಗಲಿ: ತಾಪಂನಿಂದ ಟಿವಿಯನ್ನು ಬನ್ನಿಕೊಪ್ಪ ಗ್ರಾಪಂಗೆ ನೀಡಲಾಗಿತ್ತು ಎಂಬ ಮಾಹಿತಿ ಇದೆ. ಆದರೆ ಗ್ರಂಥಾಲಯದಲ್ಲಿ ಟಿವಿ ಇಲ್ಲ. ಗ್ರಾಮದ ಗ್ರಂಥಾಲಯದಲ್ಲಿ ಟಿವಿ ಇಲ್ಲದಿರುವುದು ಮುಜುಗರದ ಸಂಗತಿ. ಇದರ ಬಗ್ಗೆ ಮಾಹಿತಿ ಕೇಳಿದರೆ ತಾಪಂನವರು ಜಿಪಂ ಅವರಿಗೆ ಮಾಹಿತಿ ಕೇಳಿ ಪತ್ರ ಬರೆದಿದ್ದಾರೆ. ಜಿಪಂಗೆ ತಾಪಂ ಅವರ ಪತ್ರ ಅಡ್ಡಗೊಡೆ ಮೇಲೆ ದೀಪ ಇಟ್ಟಂತೆ ಆಗಿದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ ಎಂದು ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ನಾಗರಾಜ ವೆಂಕಟಾಪುರ ಹೇಳಿದರು.