ಕೃಷಿಯ ವೆಚ್ಚ ಹೆಚ್ಚು, ಉತ್ಪಾದನೆ ಕಡಿಮೆ ಹೀಗೆ ಹಲವು ಕಾರಣ ಇದೆ. ಇದರ ಜೊತೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾದರೆ ಕೇಳಬೇಕಾ?
ಅಡಿಕೆ ಸಸಿ, ಬಾಳೆ, ತೆಂಗಿನ ಗಿಡಗಳ ನಾಶ । ಉಪಟಳಕ್ಕೆ ಕೊನೆ ಎಂದು?
ಪ್ರಸಾದ್ ನಗರೆಕನ್ನಡ ಪ್ರಭ ವಾರ್ತೆ ಹೊನ್ನಾವರ
ಕೃಷಿ ಎಂದರೆ ಮೂಗು ಮುರಿಯುವವರೇ ಇಂದಿನ ಕಾಲದಲ್ಲಿ ಹೆಚ್ಚಾಗಿದ್ದಾರೆ. ಇದಕ್ಕೆ ಕಾರಣ ಹಲವಿದೆ. ಕೂಲಿ ಸಮಸ್ಯೆ, ಹಳ್ಳಿಯಲ್ಲಿ ಯುವ ಸಮುದಾಯ ಇರಲು ಮನಸ್ಸು ಮಾಡದೆ ಇದ್ದಿದ್ದು, ಕೃಷಿಯ ವೆಚ್ಚ ಹೆಚ್ಚು, ಉತ್ಪಾದನೆ ಕಡಿಮೆ ಹೀಗೆ ಹಲವು ಕಾರಣ ಇದೆ. ಇದರ ಜೊತೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಾದರೆ ಕೇಳಬೇಕಾ? ಕೃಷಿಯನ್ನು ಮಾಡುವವರು ಸಹ ಇದರ ಸಹವಾಸವೇ ಸಾಕು ಎಂದು ಹೇಳುತ್ತಾರೆ. ಇದೇ ಪರಿಸ್ಥಿತಿ ತಾಲೂಕಿನ ನಗರೆ ಗ್ರಾಮದಲ್ಲಿದೆ.ಬಹುತೇಕ ಜನರು ನಂಬಿರುವುದೇ ಕೃಷಿಯನ್ನು. ಅದರಲ್ಲೂ ಅಡಿಕೆಯನ್ನು ಪ್ರಧಾನ ಬೆಳೆಯಾಗಿ ಬೆಳೆಯುತ್ತಾರೆ. ಇದರ ಉತ್ಪನ್ನದ ಮೇಲೆ ಜನರು ಅವಲಂಬಿತವಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಗರೆಯ ಗ್ರಾಮದಲ್ಲಿ ರೈತರು ಕಷ್ಟಪಟ್ಟು ನೆಟ್ಟ ಅಡಿಕೆ ಗಿಡವನ್ನು ರಾತ್ರಿ ಬೆಳಗಾಗುವುದರೊಳಗಾಗಿ ಕಾಡು ಹಂದಿಗಳು ಬಂದು ನಾಶ ಮಾಡುತ್ತವೆ. ಇದು ಸಹಜವಾಗಿಯೇ ಕೃಷಿಕರನ್ನು ಬೇಸರಕ್ಕೆ ದೂಡುತ್ತಿದೆ. ಅಲ್ಲದೆ ಅಡಿಕೆ ಬೆಳೆಯುವ ಕಾಯಕ ಎಂದರೆ ಅದೊಂದು ಸಾಹಸ ಎಂದು ಹೇಳುವಷ್ಟರ ಮಟ್ಟಿಗೆ ಬಂದು ನಿಲ್ಲಿಸಿದೆ.
ಇನ್ನು ಮನೆಯ ಸಮೀಪವೇ ತೋಟ ಇದ್ದರೂ ಸಹ ಹಂದಿಯಿಂದ ಅಡಿಕೆ ಗಿಡವನ್ನು ರಕ್ಷಿಸಿಕೊಳ್ಳಲು ರೈತರಿಂದ ಸಾಧ್ಯವಾಗುತ್ತಿಲ್ಲ. ಕಾರಣ ಹಂದಿಗಳು ತೋಟಕ್ಕೆ ನುಗ್ಗುವುದು ಮಧ್ಯರಾತ್ರಿಯ ಸಮಯದಲ್ಲಿ ಆಗಿದೆ. ಹಿಂಡು ಹಿಂಡಾಗಿ ಬರುವ ಹಂದಿಗಳು ರಾತ್ರಿ ೧ ಗಂಟೆಯಿಂದ ೪ ಗಂಟೆಯೊಳಗೆ ತೋಟಕ್ಕೆ ದಾಳಿಯಿಡುವುದು ಸಾಮಾನ್ಯವಾಗಿದೆ. ಅಡಿಕೆ ಸಸಿ, ಬಾಳೆ ಗಿಡ, ತೆಂಗಿನ ಗಿಡ, ಕೆಸು ಮೊದಲಾದ ಗಿಡವನ್ನು ಸಂಪೂರ್ಣ ನಾಶ ಮಾಡಿ ಹೋಗುತ್ತವೆ. ಅಡಿಕೆ ತೋಟದ ನೀರು ಹೋಗಲು ಮಾಡುವ ಕಾಲುವೆಯನ್ನು ಸಹ ಅಗೆದು ಹಾಕಿ ನಾಶ ಮಾಡುತ್ತವೆ. ಇದು ಸಹಜವಾಗಿಯೇ ರೈತರಲ್ಲಿ ಬೇಸರ ಆವರಿಸುವಂತೆ ಮಾಡಿದೆ.ಪಟಾಕಿಗೂ ಭಯವಿಲ್ಲ:ಕಾಡು ಹಂದಿಯಿಂದ ತಮ್ಮ ತೋಟ ರಕ್ಷಿಸಿಕೊಳ್ಳಲು ರೈತರುರಾತ್ರಿ ೧೦ ಗಂಟೆಯ ನಂತರ ಪಟಾಕಿ ಹೊಡೆಯುತ್ತಾರೆ. ಸಮೀಪದಲ್ಲಿ ಬರುತ್ತಿರುವ ಹಂದಿಗಳು ಆ ಶಬ್ಧಕ್ಕೆ ಓಡಿ ಹೋಗಲಿ. ಇಲ್ಲಿ ಜನವಸತಿ ಇದೆ ಎಂದು ಅರಿಯಲಿ ಎಂಬ ಕಾರಣಕ್ಕೆ ಹೊಡೆಯುತ್ತಾರೆ. ಆದರೂ ಸಹ ಹಂದಿಗಳು ಬಂದು ತೋಟ ಹಾಳುಗೆಡುವುದು ಕಡಿಮೆ ಆಗುತ್ತಿಲ್ಲ.ಪ್ರಹಾರ ಮಾಡುವಂತಿಲ್ಲ:
ಇನ್ನು ಜನಸಾಮಾನ್ಯರು ಯಾರು ಸಹ ಕಾಡುಪ್ರಾಣಿಗಳ ಮೇಲೆ ಹಲ್ಲೆ ಮಾಡುವಂತಿಲ್ಲ ಎಂಬ ಕಾನೂನಿದೆ. ಜೊತೆಗೆ ಬಂದೂಕು ಬಳಸುವಂತಿಲ್ಲ. ಪ್ರಾಣಿಗಳಿಗೆ ಹಲ್ಲೆ ಮಾಡಿದರೆ, ಹಲ್ಲೆ ಮಾಡಿದವರನ್ನು ಜೈಲಿಗೆ ಹಾಕುವ ಕಾನೂನು ನಮ್ಮಲ್ಲಿದೆ. ಜೊತೆಗೆ ಸಂಬಂಧಿಸಿದ ಇಲಾಖೆಗೆ ತಿಳಿಸಿದರೂ ಇದಕ್ಕೆ ಪರಿಹಾರ ಸಿಗುತ್ತದೆ ಎಂಬ ಆಸೆಯನ್ನು ರೈತರು ಹೊಂದಿಲ್ಲ. ಹೀಗಾಗಿ ರೈತರಿಗೆ ದಿಕ್ಕುತೋಚದಂತಾಗಿದೆ.ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು, ಗ್ರಾಪಂನವರು ರೈತರ ಬಗ್ಗೆ ಗಮನ ಹರಿಸಿ, ಸೂಕ್ತ ಪರಿಹಾರ ಸಿಗುವಂತೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.