ಈ ಸರ್ಕಾರ ಬಂದ ಮೇಲೆ ಶಾಲೆ ಪ್ರಾರಂಭವಾಗಿ ಆರೇಳು ತಿಂಗಳಾಗಿದೆ. ಈ ವರೆಗೂ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸಿಲ್ಲ. ಅದಕ್ಕೆ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮಕ್ಕಳು ಶೂ, ಸಾಕ್ಸ್‌ ಇಲ್ಲದೇ, ಬಿಸಿಲು, ಮಳೆಯಲ್ಲೇ ಬರಿಗಾಲಲ್ಲೇ ಸಂಚರಿಸುವಂತಾಗಿದೆ.

ಹುಬ್ಬಳ್ಳಿ:

ಪ್ರಸಕ್ತ ಸಾಲಿನಲ್ಲಿ ಶಾಲೆಗಳಿಗೆ ಅನುದಾನವೇ ಬಂದಿಲ್ಲ. ಜತೆಗೆ ಶಾಲೆಗಳು ಪ್ರಾರಂಭವಾಗಿ ಇಷ್ಟು ದಿನವಾದರೂ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸಿಲ್ಲ. ಸರ್ಕಾರದ ಬಳಿ ದುಡ್ಡಿಲ್ಲವೇ ಎಂದು ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದರು.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆಯ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಮೂರು ವರ್ಷದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿನ ಶಾಲೆಗಳಿಗೆ ಬಿಡುಗಡೆಯಾದ ಅನುದಾನವೆಷ್ಟು ಎಂದು ಪ್ರಶ್ನಿಸಿದರು. ಜತೆಗೆ 2023-24ರಲ್ಲಿ ₹ 2.31 ಕೋಟಿ, 2024-25ರಲ್ಲಿ ₹ 92 ಲಕ್ಷ ಬಿಡುಗಡೆಯಾಗಿದೆ. 2025-26ರಲ್ಲಿ ಒಂದು ಪೈಸೆಯಷ್ಟು ಬಿಡುಗಡೆಯಾಗಿಲ್ಲ ಎಂದು ಸರ್ಕಾರ ಉತ್ತರ ಕೊಟ್ಟಿದೆ. ಸರ್ಕಾರದ ಬಳಿ ದುಡ್ಡಿಲ್ಲವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ಈ ಪ್ರಶ್ನೆ ಕೇಳಿದಾಗ ಇನ್ನು ಅಲೋಕೇಷನ್‌ ಮಾಡಿರಲಿಲ್ಲ. ಹೀಗಾಗಿ ತಿಳಿಸಿರಲಿಲ್ಲ. ಈ ವರ್ಷ ಹೊಸ ಕೊಠಡಿಗೆ ರಾಜ್ಯದಲ್ಲೇ ₹ 360 ಕೋಟಿ, ಕೊಠಡಿಗಳ ದುರಸ್ತಿಗೆ ₹ 100 ಕೋಟಿ, ಶೌಚಾಲಯ ನಿರ್ಮಾಣಕ್ಕೆ ₹ 90 ಕೋಟಿ ಹಾಗೂ ಪಿಯು ಶಿಕ್ಷಣಕ್ಕೆ ₹ 97 ಕೋಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಒಂದೆರಡು ದಿನದಲ್ಲಿ ಅನುದಾನ ಬಿಡುಗಡೆಯಾಗಿ ಸರ್ಕಾರಿ ಆದೇಶ ಹೊರಡಿಸಲಾಗುತ್ತಿದೆ. ಆಗ ನಿಮ್ಮ ಕ್ಷೇತ್ರಕ್ಕೆ ಎಷ್ಟು ಅನುದಾನ ದೊರೆಯಲಿದೆ ಎಂಬುದು ತಿಳಿಸಲಾಗುವುದು ಎಂದರು.

ಇದಕ್ಕೆ ಮರುಪ್ರಶ್ನಿಸಿದ ಟೆಂಗಿನಕಾಯಿ, ಆಗಲೇ ಡಿಸೆಂಬರ್‌ ಮುಗಿಯುತ್ತಾ ಬಂದಿದೆ. ಈಗ ಅನುದಾನ ಬಿಡುಗಡೆ ಮಾಡಿ ಟೆಂಡರ್‌ ಪ್ರಕ್ರಿಯೆ ಮಾಡಿ ಕೆಲಸ ಶುರುವಾಗುವುದು ಯಾವಾಗ? ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಅಲ್ಲವೇ? ಎಂದರು. ಅದಕ್ಕೆ ಸಚಿವರು ತಕ್ಷಣವೇ ಕೆಲಸ ಶುರು ಮಾಡಲಾಗುವುದು ಎಂದು ಸಮಾಜಾಯಿಷಿ ನೀಡಿದರು.

ಬಳಿಕ ಟೆಂಗಿನಕಾಯಿ, ಈ ಸರ್ಕಾರ ಬಂದ ಮೇಲೆ ಶಾಲೆ ಪ್ರಾರಂಭವಾಗಿ ಆರೇಳು ತಿಂಗಳಾಗಿದೆ. ಈ ವರೆಗೂ ಮಕ್ಕಳಿಗೆ ಶೂ, ಸಾಕ್ಸ್‌ ವಿತರಿಸಿಲ್ಲ. ಅದಕ್ಕೆ ಕಡಿಮೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಮಕ್ಕಳು ಶೂ, ಸಾಕ್ಸ್‌ ಇಲ್ಲದೇ, ಬಿಸಿಲು, ಮಳೆಯಲ್ಲೇ ಬರಿಗಾಲಲ್ಲೇ ಸಂಚರಿಸುವಂತಾಗಿದೆ ಎಂದರು. ಅದಕ್ಕೆ ಸಚಿವ ಮಧು ಬಂಗಾರಪ್ಪ, ಕೆಲ ಶಾಲೆಗಳ ಮಕ್ಕಳ ವಿವರ ಸಲ್ಲಿಸುವುದು ವಿಳಂಬವಾಗಿದ್ದರೆ ಶೂ-ಸಾಕ್ಸ್‌ ವಿತರಣೆಯಲ್ಲಿ ವಿಳಂಬವಾಗಿದೆ ಅಷ್ಟೇ ಎಂದರು. ಇದಕ್ಕೆ ಟೆಂಗಿನಕಾಯಿ, ಶೂ, ಸಾಕ್ಸ್‌ ಖರೀದಿಗೆ ಕೆಲ ಶಾಲೆಗಳಲ್ಲಿ ಸಂಚಿತ ನಿಧಿಯನ್ನೇಕೆ ಬಳಸಲಾಗುತ್ತಿದೆ ಎಂದು ಮರುಪ್ರಶ್ನಿಸಿದರು. ಆ ರೀತಿ ಸಂಚಿತ ನಿಧಿ ಬಳಸುವಂತಿಲ್ಲ. ಒಂದು ವೇಳೆ ಬಳಸಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಸಚಿವರು ಸ್ಪಷ್ಟಪಡಿಸಿ ಚರ್ಚೆಗೆ ತೆರೆ ಎಳೆದರು.