ಸಂತ್ರಸ್ತೆಗೆ ಒಂದೇ ದಿನದಲ್ಲಿ ವಿಧವಾ ಪಿಂಚಣಿ...!

| Published : Dec 30 2024, 01:02 AM IST

ಸಾರಾಂಶ

ಈಚೆಗೆ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ಮೀನುಗಾರ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿಗೆ ಒಂದೇ ದಿನದಲ್ಲಿ ಪಿಂಚಣಿ ಮಂಜೂರು ಮಾಡಿ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಈಚೆಗೆ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ಮೀನುಗಾರ ಹಾಗೂ ಇಬ್ಬರು ಮಕ್ಕಳು ನೀರು ಪಾಲಾದ ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿಗೆ ಒಂದೇ ದಿನದಲ್ಲಿ ಪಿಂಚಣಿ ಮಂಜೂರು ಮಾಡಿ ತಹಸೀಲ್ದಾರ್‌ ಆದೇಶ ಹೊರಡಿಸಿದ್ದಾರೆ.

ಬೆನಕನಹೊಳಿ ಗ್ರಾಮದ ಲಕ್ಷ್ಮಣ ಅಂಬಲಿ ಮತ್ತು ಆತನ ಇಬ್ಬರು ಮಕ್ಕಳು ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಮುಳುಗಿ ಮೃತಪಟ್ಟಿದ್ದರು. ಪತಿ ಸಮೇತ ಇಬ್ಬರು ಮಕ್ಕಳನ್ನು ಅಕಾಲಿಕವಾಗಿ ಕಳೆದುಕೊಂಡ ಲಕ್ಷ್ಮೀ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಉಪಜೀವನ ನಡೆಸುವುದು ದುಸ್ತರವಾಗಿತ್ತು. ಆಕೆಯ ಸಮಸ್ಯೆ ಆಲಿಸಿದ ತಹಸೀಲ್ದಾರ್ ಮಂಜುಳಾ ನಾಯಕ ದುರಂತದ ಮರುದಿನವೇ ಆರೋಗ್ಯ ಅಧಿಕಾರಿಗಳಿಂದ ಮರಣೋತ್ತರ ವರದಿ, ಬ್ಯಾಂಕ್ ಖಾತೆ ಸೇರಿದಂತೆ ಅಗತ್ಯ ದಾಖಲೆ ಕ್ರೋಡೀಕರಿಸಿ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿ ಕ್ಷೀಪ್ರಗತಿಯಲ್ಲಿ ಪಿಂಚಣಿ ಮಂಜೂರುಗೊಳಿಸಿ ಆದೇಶಿಸಿದ್ದಾರೆ. ಅದೇ ದಿನ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಂದ ಸಂತೃಸ್ತೆ ಲಕ್ಷ್ಮೀಗೆ ಆದೇಶ ಪತ್ರ ವಿತರಿಸಿದ್ದಾರೆ.

ಇದೇ ವೇಳೆ ಲಕ್ಷ್ಮೀ ಅಂಬಲಿಗೆ ಕಂದಾಯ ಇಲಾಖೆಯಿಂದ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ ₹20 ಸಾವಿರ ಕೂಡ ವಿತರಿಸಲಾಯಿತು. ಮೀನುಗಾರಿಕೆ ಸಂಕಷ್ಟ ಪರಿಹಾರ ನಿಧಿಯಿಂದ ₹8 ಲಕ್ಷ ರೂಗಳ ಪರಿಹಾರ ನಿಧಿ, ಕೇಂದ್ರ ಸರ್ಕಾರದಿಂದ ₹5 ಲಕ್ಷ ಚೆಕ್ ನೀಡುವಲ್ಲಿ ಕಂದಾಯ ಇಲಾಖೆ ಪ್ರಮುಖ ಪಾತ್ರ ವಹಿಸಿದೆ. ವಿಧವಾ ಪಿಂಚಣಿ ಮತ್ತು ಇತರೆ ನೆರವು ನೀಡುವಲ್ಲಿ ತಹಸೀಲ್ದಾರ್‌ ಮಂಜುಳಾ ನಾಯಕ ಅವರಿಗೆ ಉಪತಹಸೀಲ್ದಾರ್‌ ಚನ್ನಮ್ಮ ಶೀಗಿಹೊಳಿ, ಕಂದಾಯ ನಿರೀಕ್ಷಕ ಸಿ.ಕೆ. ಕಲಕಾಂಬಕರ, ಗ್ರಾಮ ಆಡಳಿತ ಅಧಿಕಾರಿ ಹುಸೇನ ತಹಸೀಲ್ದಾರ ಸಾಥ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸರ್ಕಾರ ನೀಡುವ ಸವಲತ್ತುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಮೀನು ಹಿಡಿಯಲು ಹೋಗಿ ನದಿಯಲ್ಲಿ ಮೃತಪಟ್ಟ ಕುಟುಂಬದ ಲಕ್ಷ್ಮೀ ಬದುಕಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ವಿವಿಧ ಯೋಜನೆಯಡಿ ಸೌಲಭ್ಯ ಕಲ್ಪಿಸಿರುವ ಸಂತೃಪ್ತಿ ಇದೆ.

- ಮಂಜುಳಾ ನಾಯಕ, ತಹಸೀಲ್ದಾರ್‌ ಹುಕ್ಕೇರಿ