ಸಾರಾಂಶ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಪತಿಯೇ ಸಂಧಾನಕಾರರ ಸಮ್ಮುಖದಲ್ಲೇ ಚಾಕುವಿನಿಂದ ಇರಿದ ಘಟನೆ ದಾವಣಗೆರೆ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆವರಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಪತಿಯೇ ಸಂಧಾನಕಾರರ ಸಮ್ಮುಖದಲ್ಲೇ ಚಾಕುವಿನಿಂದ ಇರಿದ ಘಟನೆ ದಾವಣಗೆರೆ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆವರಣದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.ಇಲ್ಲಿನ ಜಯನಗರ ನಿವಾಸಿ ಪದ್ಮಾವತಿ (30) ಇರಿತಕ್ಕೆ ಒಳಗಾದ ಮಹಿಳೆ. ತನ್ನ ಪತಿ ಪ್ರವೀಣ್ ಕುಮಾರ್‌ನಿಂದ (36) ವಿಚ್ಛೇದನ ಕೋರಿ ಜಿಲ್ಲಾ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚ್ಛೇದನ ಪಡೆಯುವುದನ್ನು ಸಹಿಸಲಾಗದೆ ಪ್ರವೀಣ್ ಇರಿದು, ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಪ್ರವೀಣ್ ಮತ್ತು ಪದ್ಮಾವತಿ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದರು. ದಂಪತಿಗೆ ಒಂದು ಹೆಣ್ಣುಮಗುವಿದೆ. ಆದರೆ ಕೆಲ ದಿನಗಳಿಂದ ಇಬ್ಬರ ನಡುವ ವೈಮನಸ್ಯ ಮೂಡಿತ್ತು. ಪ್ರವೀಣ್ ತನ್ನ ಪತ್ನಿಯ ಶೀಲದ ಮೇಲೆಯೂ ಸಹ ಶಂಕೆ ವ್ಯಕ್ತಪಡಿಸಿದ್ದ. ಜೊತೆಗೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಹೀಗಾಗಿ ಬೇರ್ಪಡಲು ದಾವಣಗೆರೆಯ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆ ಹೋಗಿದ್ದರು.ಶನಿವಾರ ಮಧ್ಯಾಹ್ನ ಇಲ್ಲಿನ ಸಂಧಾನಕಾರರ ಜೊತೆಗೆ ಮಾತುಕತೆ ನಡೆಯುತ್ತಿರುವಾಗ ಪ್ರವೀಣ್ ತಾನು ತಂದಿದ್ದ ಚೂರಿಯಿಂದ ಇರಿದಿದ್ದಾನೆ. ಅಲ್ಲೇ ಅಕ್ಕಪಕ್ಕವಿದ್ದ ವಕೀಲರು, ಸಾರ್ವಜನಿಕರು ಪ್ರವೀಣ್‌ನನ್ನು ಕೂಡಲೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪದ್ಮಾವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆಗೆ ಸ್ಪಂದನೆ:ಇರಿತಕ್ಕೆ ಒಳಗಾದ ಪದ್ಮಾವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅಪಾಯದಿಂದ ಹೊರಬಂದಿದ್ದಾರೆ ಎಂಬುದು ತಿಳಿದುಬಂದಿದೆ.