ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಸರ್ಕಾರದ ಪರಿಹಾರ ಪಡೆಯುವ ಸಲುವಾಗಿ ಪತಿಯನ್ನೆ ವಿಷ ಹಾಕಿ ಸಾಯಿಸಿ, ವನ್ಯಪ್ರಾಣಿಗೆ ಬಲಿಯಾಗಿದ್ದಾರೆಂದು ಬಿಂಬಿಸಲು ಹೋದ ಪತ್ನಿಯೇ ಸಿಕ್ಕಿ ಬಿದ್ದಿರುವ ಘಟನೆ ಹನಗೋಡಿಗೆ ಸಮೀಪದ ಚಿಕ್ಕ ಹೆಜ್ಜೂರಿನ ತೋಟದ ಮನೆಯಲ್ಲಿ ನಡೆದಿದೆ.ನಾಗರಹೊಳೆ ಉದ್ಯಾನದಂಚಿನ ಚಿಕ್ಕಹೆಜ್ಜೂರು ಬಳಿಯ ಬೆಂಗಳೂರಿನ ರವಿ ಎಂಬವರ ತೋಟದಲ್ಲಿ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಮಳವಳ್ಳಿ ತಾಲೂಕಿನ ಕದಂಪೂರ ಗ್ರಾಮದ ವೆಂಕಟಸ್ವಾಮಿ (45) ಕೊಲೆಯಾಗಿರುವವರು, ಈತನ ಪತ್ನಿ ಸೊಲ್ಲಾಪುರಿಯೇ ಕೊಲೆ ಆರೋಪಿ.
ವರ್ಷದ ಹಿಂದೆ ವೆಂಕಟಸ್ವಾಮಿ ಹಾಗೂ ಸೊಲ್ಲಾಪುರಿ ದಂಪತಿ ತೆಂಗಿನ ತೋಟದಲ್ಲಿ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ಇವರು, ತಮ್ಮೂರಿನಲ್ಲಿ ಮನೆ ನಿರ್ಮಿಸಲು 10 ಲಕ್ಷ ಹಾಗೂ ಕೈಸಾಲ 5 ಲಕ್ಷ ಸಾಲ ಮಾಡಿ ಕೊಂಡಿದ್ದರು. ಸಾಲಗಾರರ ಕಾಟ ಸಾಕಷ್ಟಿದ್ದರಿಂದ ವೆಂಕಟಸ್ವಾಮಿ ಕುಡಿತದ ಚಟ ಅಂಟಿಸಿಕೊಂಡಿದ್ದ, ಪತಿ-ಪತ್ನಿಯ ನಡುವೆ ಜಗಳವಾಗುತ್ತಿತ್ತು.ಪ್ಲಾನ್ ಮಾಡಿದ ಪತ್ನಿ; ವನ್ಯಜೀವಿಗಳ ದಾಳಿಗೆ ಒಳಗಾದಲ್ಲಿ ಸರ್ಕಾರದಿಂದ 15 ಲಕ್ಷ ರು. ಪರಿಹಾರ ಸಿಗಲಿದೆ ಮಾಹಿತಿ ಪಡೆದಿದ್ದ ಈಕೆ, ಇದಕ್ಕಾಗಿ ಗಂಡನನ್ನೇ ಬಲಿ ಕೊಡಲು ನಿರ್ಧರಿಸಿ ಮಂಗಳವಾರ ರಾತ್ರಿ ಕುಡಿದು ಬಂದಿದ್ದ ಗಂಡನಿಗೆ ಮುದ್ದೆಯಲ್ಲಿ ಕ್ರಿಮಿನಾಶಕ ಹಾಕಿದ್ದಾಳೆ. ಬೆಳಗಾಗುವುದರೊಳಗೆ ಮೃತಪಟ್ಟಿದ್ದ ಪತಿಯ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದಾಳೆ. ಅರೆಬರೆ ಬೆಂದಿದೆ. ಗಾಬರಿಗೊಂಡ ಆಕೆ ತಿಪ್ಪೆಯಲ್ಲಿ ಮುಚ್ಚಿ, ಗಂಡ ನಾಪತ್ತೆಯಾಗಿದ್ದಾನೆ ಯಾವುದೋ ಕಾಡು ಪ್ರಾಣಿ ಹೊತ್ಯೊಯ್ದಿರಬೇಕೆಂದು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾಳೆ.
ಸ್ಥಳ ಪರಿಶೀಲನೆಗೆ ತೆರಳಿದ್ದ ಇನ್ಸ್ಪೆಕ್ಟರ್ ಮುನಿಸ್ವಾಮಿ ಮತ್ತು ಪೊಲೀಸ್ ತಂಡಕ್ಕೆ ಈಕೆಯ ವರ್ತನೆಯಿಂದ ಅನುಮಾನ ಬಂದು ವಿಚಾರಣೆಗೆ ಒಳಪಡಿಸಲಾಗಿ ತಾನು ಸಾಲ ತೀರಿಸಲು ಮಾಡಿದ ಪ್ಲಾನ್ ಎಂದು ಒಪ್ಪಿಕೊಂಡಿದ್ದಾಳೆ.ಶವ ಹೊರ ತೆಗೆದರು; ಗುರುವಾರದಂದು ತಹಸೀಲ್ದಾರ್ ಮಂಜುನಾಥ ಅವರ ಸಮ್ಮುಖದಲ್ಲಿ ತಿಪ್ಪೆಯಿಂದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಮಲ್ಲಿಕ್, ಡಿವೈಎಸ್ಪಿ ಗೋಪಾಲ ಕೃಷ್ಣ ಭೇಟಿ ನೀಡಿದ್ದರು.
ಇದೀಗ ಆರೋಪಿ ಸೊಲ್ಲಾಪುರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.