ಮನೆಗೆಲಸದವರ ಮಂಡಳಿ ರಚನೆ,ಮಾಲೀಕರ ಮೇಲೆ ಶೇ.5 ಸೆಸ್‌?

| Published : Sep 21 2025, 02:00 AM IST

ಸಾರಾಂಶ

ಮನೆ ಕೆಲಸದವರ ಕಲ್ಯಾಣಕ್ಕೆ ಮಂಡಳಿ ರಚಿಸಲು ಮುಂದಾಗಿರುವ ಸರ್ಕಾರ, ಕೆಲಸದವರ ಮಾಹಿತಿಯನ್ನು ಮಾಲೀಕರೇ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಜತೆಗೆ ಕೆಲಸಗಾರರ ಕಲ್ಯಾಣ ಕಾರ್ಯಗಳಿಗೆ ಮಾಲೀಕರಿಂದ ಶೇ.5ರಷ್ಟು ಸೆಸ್‌ ವಸೂಲಿ ಮಾಡಲೂ ಚಂತನೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮನೆ ಕೆಲಸದವರ ಕಲ್ಯಾಣಕ್ಕೆ ಮಂಡಳಿ ರಚಿಸಲು ಮುಂದಾಗಿರುವ ಸರ್ಕಾರ, ಕೆಲಸದವರ ಮಾಹಿತಿಯನ್ನು ಮಾಲೀಕರೇ ನೋಂದಣಿ ಮಾಡಿಸುವುದನ್ನು ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಜತೆಗೆ ಕೆಲಸಗಾರರ ಕಲ್ಯಾಣ ಕಾರ್ಯಗಳಿಗೆ ಮಾಲೀಕರಿಂದ ಶೇ.5ರಷ್ಟು ಸೆಸ್‌ ವಸೂಲಿ ಮಾಡಲೂ ಚಂತನೆ ನಡೆಸಿದೆ.

ಗಿಗ್‌ ಕಾರ್ಮಿಕರ ಕಲ್ಯಾಣಕ್ಕಾಗಿ ಕಾಯ್ದೆ ರೂಪಿಸಿದ್ದ ಬೆನ್ನಲ್ಲೇ ಕಾರ್ಮಿಕ ಇಲಾಖೆ ಇದೀಗ ಮನೆಕೆಲಸದವರ ಸಾಮಾಜಿಕ ಭದ್ರತೆಗೂ ಮುಂದಾಗಿದ್ದು ಕಾಯ್ದೆಗೆ ಸಂಬಂಧಿಸಿ ಕರಡು ಸಿದ್ಧಪಡಿಸುತ್ತಿದೆ. ಕಾಯ್ದೆಯ ಸಾಧಕ-ಬಾಧಕಗಳನ್ನು ಚರ್ಚಿಸಿ, ಆಕ್ಷೇಪಣೆ ಆಹ್ವಾನಿಸಿ ಬಳಿಕ ಇದಕ್ಕೆ ಸ್ಪಷ್ಟ ರೂಪ ಕೊಡಲಿದೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ‘ಕರ್ನಾಟಕ ಮನೆಕೆಲಸದವರ (ಸಾಮಾಜಿಕ ಭದ್ರೆತೆ ಮತ್ತು ಕಲ್ಯಾಣ) ಕಾಯ್ದೆ-2025’ ರೂಪಿಸಲಿದ್ದು ಕರಡು ರಚನೆಯಲ್ಲಿ ತೊಡಗಿದೆ. ಮನೆಕೆಲಸದವರು, ಚಾಲಕರು, ಸ್ವಚ್ಛತಾಗಾರರು ಸೇರಿ ಮನೆಕೆಲಸ ಮಾಡುವ ಸಿಬ್ಬಂದಿಯ ಕ್ಷೇಮಕ್ಕಾಗಿ ಈ ಕಾಯ್ದೆ ರಚನೆಯಾಗಲಿದ್ದು, ಈ ಕೆಲಸಗಾರರನ್ನು ನಿಯೋಜಿಸಿಕೊಳ್ಳುವ ಮಾಲೀಕರು ಮತ್ತು ಕೆಲಸಗಾರರ ನಡುವೆ ಕೆಲಸದ ಅವಧಿ, ಸಂಬಳ, ಸೌಲಭ್ಯ ಮತ್ತಿತರ ವಿಷಯಗಳ ಬಗ್ಗೆ ಒಪ್ಪಂದ ಮಾಡಿಕೊಳ್ಳಬೇಕು. ಕೆಲಸಗಾರರ ಮಾಹಿತಿ ನೋಂದಣಿ ಮಾಡಿಕೊಂಡು ಕಾರ್ಮಿಕರ ಕಲ್ಯಾಣಕ್ಕೆ ವೇತನದ ಶೇ.5 ರಷ್ಟು ಸೆಸ್‌ ಆಗಿ ಮಾಲೀಕರು ಪಾವತಿಸಬೇಕು ಎಂಬುದನ್ನು ಕಾಯ್ದೆ ಒಳಗೊಂಡಿರಲಿದೆ.

‘ಕರ್ನಾಟಕ ರಾಜ್ಯ ಮನೆಕೆಲಸದವರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಂಡಳಿ’ ಸ್ಥಾಪಿಸಿ ಮಂಡಳಿ ಮೂಲಕ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಲಾಗುವುದು. ಮಂಡಳಿ ಮೂಲಕವೇ ಹಣಕಾಸು ಕ್ರೋಢೀಕರಣ, ಯೋಜನೆಗಳ ಅನುಷ್ಠಾನ, ಕೌಶಲ್ಯ ತರಬೇತಿ ಮತ್ತಿತರ ಕಾರ್ಯಗಳನ್ನು ಕೈಗೊಳ್ಳಲಾಗುವುದು.

ಮಂಡಳಿಯಲ್ಲಿ ಸರ್ಕಾರದ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಮುಖಂಡರು, ನಿವಾಸಿ ಕ್ಷೇಮಾಭಿವೃದ್ಧಿ ಸಂಘದವರಿಗೆ ಅವಕಾಶ ಕಲ್ಪಿಸಲಾಗುವುದು. ಕೆಲಸಗಾರರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ಹಣ ಪಾವತಿಸಿದರೆ ಜೈಲು ಶಿಕ್ಷೆ, ದಂಡ ವಿಧಿಸಲೂ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.