ಸಾರಾಂಶ
ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮಾನವನ ಉದ್ಯೋಗವನ್ನು ಕಸಿಯಲಿದೆ ಎಂಬ ಆತಂಕದ ನಡುವೆಯೇ, ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಸುಮಾರು 8000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಜಾಗದಲ್ಲಿ ಎಐ ಏಜೆಂಟ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.
ಮಾನವನ ಬದಲಿಗೆ ಎಐ ಏಜೆಂಟ್ ಕಾರ್ಯನಿರ್ವಹಣೆ
ನ್ಯೂಯಾರ್ಕ್: ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮಾನವನ ಉದ್ಯೋಗವನ್ನು ಕಸಿಯಲಿದೆ ಎಂಬ ಆತಂಕದ ನಡುವೆಯೇ, ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಸುಮಾರು 8000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಜಾಗದಲ್ಲಿ ಎಐ ಏಜೆಂಟ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.ವರದಿಗಳ ಪ್ರಕಾರ ಈ ಉದ್ಯೋಗ ಕಡಿತದ ಬಹುಪಾಲು ಮಾನವ ಸಂಪನ್ಮೂಲ (ಎಚ್‌ಆರ್) ವಿಭಾಗದ ಮೇಲೆ ಬಿದ್ದಿದೆ. ಇತ್ತೀಚೆಗೆ ಐಬಿಎಂ 200 ಎಚ್‌ಆರ್ ಉದ್ಯೋಗಿಗಳ ಬದಲಿಗೆ ಎಐ ಎಜೆಂಟ್‌ಗಳನ್ನು ನಿಯೋಜಿಸಿತ್ತು. ಅದಾದ ಕೆಲವೇ ದಿನಗಳಲ್ಲಿ 8000 ಮಂದಿ ಉದ್ಯೋಗ ಕಡಿತದ ವಿಚಾರ ಹೊರಬಿದ್ದಿದೆ.
ಎಐ ಏಜೆಂಟ್‌ಗಳ ಕಾರ್ಯವೇನು?:ಮಾಹಿತಿ ಹಂಚಿಕೆ, ಉದ್ಯೋಗಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ಆಂತರಿಕ ದಾಖಲೆಗಳನ್ನು ಸಂಸ್ಕರಿಸುವಂತಹ ಕಾರ್ಯಗಳನ್ನು ನಿರ್ವಹಿಸಬಹುದಾದ ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಕಂಪನಿ ಹೊಂದಿದೆ. ಈ ಏಜೆಂಟ್‌ಗಳನ್ನು ಹೆಚ್ಚು ಮಾನವ ಚಟುವಟಿಕೆ ಅಗತ್ಯವಿಲ್ಲದ ಕಾರ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಮೊದಲು ಮಾನವರು ಮಾಡುತ್ತಿದ್ದ ಅನೇಕ ಕೆಲಸಗಳನ್ನು ಎಐ ಏಜೆಂಟ್‌ಗಳು ಮಾಡುತ್ತಿರುವುದರಿಂದ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆದಿದೆ.