ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ/ಮಡಿಕೇರಿ
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲೆಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಪಾಲ್ಗೊಂಡ ಮಹಿಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಕುಶಾಲನಗರ ಸಮೀಪದ ಮಾದಪಟ್ಟಣ ಗ್ರಾಮದ ಕೂಲಿಕಾರ್ಮಿಕ ಚಲ್ಲಾ ದೊರೆ ಅವರ ಪತ್ನಿ ಶಾಂತಿ (28) ಮೃತ ಮಹಿಳೆ.ಪ್ರತಿ ತಿಂಗಳಿಗೆ ಒಮ್ಮೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉದರ ದರ್ಶಕ ಶಸ್ತ್ರಚಿಕಿತ್ಸೆ ಶಿಬಿರ ನಡೆಯುತ್ತಿದ್ದು, ಮಡಿಕೇರಿ ಸರ್ಕಾರಿ ಆಸ್ಪತ್ರೆಯಿಂದ ತಜ್ನ ವೈದ್ಯರು ಆಗಮಿಸಿ ಶಿಬಿರ ನಡೆಸಿಕೊಡುತ್ತಿದ್ದರು.
ಮಂಗಳವಾರ ಶಿಬಿರದಲ್ಲಿ ಸುತ್ತುಮುತ್ತಲಿನ ಗ್ರಾಮಗಳ ಒಟ್ಟು12 ಮಹಿಳೆಯರು ಶಿಬಿರದಲ್ಲಿ ದಾಖಲಾಗಿದ್ದು, ಅರಿವಳಿಕೆ ಇಂಜೆಕ್ಷನ್ ನೀಡುವ ಸಂದರ್ಭ ಮಹಿಳೆ ಶಾಂತಿ ತೀವ್ರ ಅಸ್ವಸ್ಥರಾದ ಸಂದರ್ಭ ಮಡಿಕೇರಿಗೆ ಆಂಬುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗಿದೆ. ದಾರಿ ಮಧ್ಯದಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.ಇನ್ನುಳಿದ 11 ಮಂದಿ ಮಹಿಳೆಯರು ಶಸ್ತ್ರ ಚಿಕಿತ್ಸೆ ನಂತರ ಕ್ಷೇಮವಾಗಿ ಮನೆಗೆ ತೆರಳಿದ್ದಾರೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಮಹಿಳೆ ಪತಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಶಾಂತಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಸತೀಶ್ ಸುದ್ದಿಗಾರರೊಂದಿಗೆ ಮಾತನಾಡಿ ಕುಶಾಲನಗರ ಸಮಯದಾಯ ಆರೋಗ್ಯ ಕೇಂದ್ರದಲ್ಲಿ ಶಾಂತಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭ ಅಸ್ವಸ್ಥಗೊಂಡಿದ್ದಾರೆಂದು ತಿಳಿದುಬಂದಿದೆ. ಕೂಡಲೇ ವೈದ್ಯರು ನಮಗೂ ಕೂಡ ಮಾಹಿತಿ ತಿಳಿಸಿದ್ದರು. ಅದರಂತೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ತಜ್ಞವೈದ್ಯರು ತಪಾಸಣೆ ಮಾಡಿದ ಸಂದರ್ಭ ಮಾರ್ಗದ ಮಧ್ಯೆ ಮೃತಪಟ್ಟಿರುವುದು ಖಚಿತವಾಗಿದೆ ಎಂದರು.ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನವೀನ್ ಎಂಬ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದರು. ಇವರು 2009ರಿಂದಲೂ ಶಸ್ತ್ರಚಿಕಿತ್ಸೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇಂತಹ ಪ್ರಕರಣಗಳು ಎಂದಿಗೂ ನಡೆದಿಲ್ಲ. ಆದರೆ ಈಗ ಆಗಿದ್ದು, ಈ ಬಗ್ಗೆ ಕುಲಂಕಷ ತನಿಖೆ ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಚಿಕಿತ್ಸೆ ಸಂದರ್ಭ ಯಾವ ಕಾರಣಕ್ಕೆ ಮಹಿಳೆ ಮೃತಪಟ್ಟಿದ್ದಾರೆಂದು ದೃಢವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ನಿಜಾಂಶ ಹೊರ ಬರಲಿದೆ. ವೈದ್ಯರ ತಂಡ ಈ ಮರಣೋತ್ತರ ಪರೀಕ್ಷೆ ನಡೆಸಲಿದ್ದು, ಖುದ್ದು ಪಾಲ್ಗೊಂಡು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.