ಸಾರಾಂಶ
ಪ್ರತಿ ತಿಂಗಳ ಮೊದಲ ಬುಧವಾರ ಬೆಳಗ್ಗೆ 11ರಿಂದ 12ರ ವರೆಗೆ ಪೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು. ಸಮಯ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜ. 22ರಂದು ಪೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.
ಹುಬ್ಬಳ್ಳಿ:ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳೊಂದಿಗೆ ಸೇರಿ ಪ್ರತಿ ತಿಂಗಳು ಮೊದಲ ಬುಧವಾರ ಫೋನ್ ಇನ್ ಕಾರ್ಯಕ್ರಮ ನಡೆಸಲು ಮೇಯರ್ ರಾಮಪ್ಪ ಬಡಿಗೇರ ತೀರ್ಮಾನಿಸಿದ್ದಾರೆ. ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಪಾಲಿಕೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್, ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು "ಮೊಬೈಲ್ ಸಂಖ್ಯೆ 82778 02331''''''''ಗೆ ಕರೆ ಮಾಡಿ ಸಮಸ್ಯೆ ಹೇಳಿದರೆ, 15 ದಿನಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಪ್ರತಿ ತಿಂಗಳ ಮೊದಲ ಬುಧವಾರ ಬೆಳಗ್ಗೆ 11ರಿಂದ 12ರ ವರೆಗೆ ಪೋನ್ ಇನ್ ಕಾರ್ಯಕ್ರಮ ನಡೆಸಲಾಗುವುದು. ಸಮಯ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜ. 22ರಂದು ಪೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಈಗಾಗಲೇ ಕಾರ್ಯದಲ್ಲಿರುವ ಪಾಲಿಕೆ ಕಂಟ್ರೋಲ್ ರೂಮ್ಗೆ ಜನರು ಎಂದಿನಂತೆ ಕರೆ ಮಾಡಿ, ಸಮಸ್ಯೆ ದಾಖಲಿಸಬಹುದು. ಕಂಟ್ರೋಲ್ ರೂಮ್ ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ಹೇಳುವ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಬಗೆಹರಿಸದೇ ಇದ್ದರೆ ಸಂಬಂಧಿಸಿದ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, ತಮ್ಮೊಂದಿಗೆ ಪಾಲಿಕೆ ಆಯುಕ್ತರು, ವಲಯ ಕಚೇರಿಗಳ ಸಹಾಯಕ ಆಯುಕ್ತರು, ಹೆಲ್ತ್ ಇನ್‌ಸ್ಪೆಕ್ಟರ್, ತೆರಿಗೆ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿರುತ್ತಾರೆ ಎಂದು ತಿಳಿಸಿದರು. ₹ 26 ಕೋಟಿ ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಬಡಿಗೇರ, ಪ್ರತಿ ಮನೆಯಿಂದ ತೆರಿಗೆ ಸಂಗ್ರಹಕ್ಕಾಗಿ ಪಾಲಿಕೆ ಸಿಬ್ಬಂದಿಗೆ 78 ಮಷಿನ್ ನೀಡಲಾಗಿದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸುತ್ತಾರೆ ಎಂದರು. ಬಾಕಿ ತೆರಿಗೆ ಹಾಗೂ ನೀರಿನ ಕರವನ್ನು ಒನ್ ಟೈಮ್ ಸೆಟ್ಲ್‌ಮೆಂಟ್ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಳಿ ಪಾಲಿಕೆ ಸರ್ವಪಕ್ಷ ಸದಸ್ಯರ ನಿಯೋಗದೊಂದಿಗೆ ಭೇಟಿ ನೀಡಲಾಗುವುದು. ಇದರೊಂದಿಗೆ ಬಾಕಿ ಪಿಂಚಣಿ ₹ 58 ಕೋಟಿ ಸೇರಿದಂತೆ ಪಾಲಿಕೆಗೆ ಸರ್ಕಾರದಿಂದ ವಿವಿಧ ಮೂಲಗಳಿಂದ ಬರಬೇಕಿರುವ ₹ 300 ಕೋಟಿ ಬಿಡುಗಡೆಗೊಳಿಸುವಂತೆಯೂ ಮನವಿ ಮಾಡಲಾಗುವುದು ಎಂದು ಹೇಳಿದರು. ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಆಸ್ತಿಗಳನ್ನು ಜಿಐಎಸ್ ಸರ್ವೇ ನಡೆಸಲು ಟೆಂಡರ್ ಕರೆಯಲಾಗಿದೆ. ಪ್ರತಿ ವರ್ಷ ಪಾಲಿಕೆಗೆ ಅಂದಾಜು ₹ 120 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದ್ದು, ಜಿಐಎಸ್ ಸರ್ವೇಯಿಂದ ₹ 350ರಿಂದ ₹ 400 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನವೀಕೃತ ಜನತಾ ಬಜಾರ್ ಕಟ್ಟಡದಲ್ಲಿ 122 ಕಟ್ಟಾಗಳನ್ನು ನಿರ್ಮಿಸಲಾಗಿದೆ. ಈ ಮೊದಲು 177 ಕಟ್ಟಾಗಳಿದ್ದವು. ಇದೀಗ, 122 ಕಟ್ಟಾಗಳನ್ನು ಹಸ್ತಾಂತರ ಮಾಡಿ, ಬಾಕಿ ಉಳಿದ ಕಟ್ಟಾಗಳನ್ನು ನಿರ್ಮಿಸಲಾಗುವುದು. ಅಂಗಡಿಗಳನ್ನು ಹರಾಜಿನ ಮೂಲಕ ಹಸ್ತಾಂತರಿಸಲಾಗುವುದು ಎಂದರು.ಉಪ ಮೇಯರ್ ದುರ್ಗಮ್ಮ ಬಿಜವಾಡ ಹಾಜರಿದ್ದರು.