ಬುಧವಾರ ಪುರಸಭೆ ಆವರಣದಲ್ಲಿ ಪಟ್ಟಣದ 17 ಮತ್ತು 19ನೇ ವಾರ್ಡ್‌ಗಳ ನಾಗರಿಕರು ಪುರಸಭೆಗೆ ಮುತ್ತಿಗೆ ಹಾಕಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ನರಗುಂದ: ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ದಿನವಿಡಿ ಅಲೆದಾಡುವಂತಾಗಿದೆ. ಸಾರ್ವಜನಿಕ ನಳಗಳಿಲ್ಲ. ನೀರಿಗಾಗಿ ಅಲೆದಾಡಬೇಕು. ತಿಳಿದಾಗೊಮ್ಮೆ ಮಧ್ಯರಾತ್ರಿ ನೀರು ಬಿಡುತ್ತಾರೆ. ದಯವಿಟ್ಟು ಕುಡಿಯಲು ಸಮರ್ಪಕವಾಗಿ ನೀರು ಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದರು.

ಬುಧವಾರ ಪುರಸಭೆ ಆವರಣದಲ್ಲಿ ಪಟ್ಟಣದ 17 ಮತ್ತು 19ನೇ ವಾರ್ಡ್‌ಗಳ ನಾಗರಿಕರು ಪುರಸಭೆಗೆ ಮುತ್ತಿಗೆ ಹಾಕಿ ಕುಡಿಯುವ ನೀರಿಗಾಗಿ ಖಾಲಿ ಕೊಡ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನಾಗರಿಕರು ಮಾತನಾಡಿ, ಕುಡಿಯುವ ನೀರಿನ ಜತೆಗೆ ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ದುಡಿಯದೇ ಇದ್ದರೆ ಜೀವನ ನಡೆಯಲ್ಲ. ದುಡಿದು ಮನೆಗೆ ಬಂದ್ಮೇಲೆ ಕುಡಿಯಲು ನೀರೇ ಇಲ್ಲದಿದ್ದಾಗ ಬದುಕೋದು ಹೇಗೆ? ಮಧ್ಯರಾತ್ರಿ ನೀರು ಬಿಡದೇ ವಾರಕ್ಕೊಮ್ಮೆಯಾದರೂ ಹಗಲು ಹೊತ್ತಿನಲ್ಲಿ ಕುಡಿಯುವ ನೀರು ಕೊಡಿ ಎಂದು ಮನವಿ ಮಾಡಿದರು.ಗುರುನಾಥ ಕೆಂಗಾರಕರ ಮಾತನಾಡಿ, ಪಟ್ಟಣದ ವಿವೇಕಾನಂದ ನಗರ, ಮಾರುತಿ ನಗರ ಮತ್ತು ರಾಚಯ್ಯ ನಗರ ಸೇರಿದಂತೆ ಅನೇಕ ಕಡೆ 15 ದಿನಕ್ಕೊಮ್ಮೆ ರಾತ್ರಿ 11 ಗಂಟೆಗೆ, 12 ಗಂಟೆಗೆ ನೀರು ಬಿಟ್ಟರೆ, ಇಂತಹ ಹೊತ್ತಲ್ಲಿ ಕೆಲವರು ನಿದ್ರೆಗೆ ಜಾರಿರುತ್ತಾರೆ. ಆಗ ಕುಡಿಯಲು ನೀರು ಸಿಗಲ್ಲ. ಬೇಸಿಗೆ ಸಮಯ ಆಗಿದ್ದರಿಂದ ನೀರಿನ ಸಮಸ್ಯೆ ಬಹಳ ಆಗುತ್ತಿದೆ. ಜತೆಗೆ ಚರಂಡಿ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ. ಪ್ರಾಣಿಗಳು ಸತ್ತರೆ ಓಣಿಯ ಪ್ರದೇಶವೆಲ್ಲವೂ ಗಬ್ಬೆದ್ದು ನಾರುತ್ತದೆ. ಬೀದಿದೀಪಗಳ ವ್ಯವಸ್ಥೆ ಸರಿಯಿಲ್ಲ. ಒಟ್ಟಿನಲ್ಲಿ ಚಂದ್ರಗೌಡ ಪ್ಲಾಟನ ಜನವಸತಿ ಪ್ರದೇಶ ಸಮಸ್ಯೆಗಳ ಕೇಂದ್ರವಾಗಿದೆ ಎಂದರು.ನವೀಲುತೀರ್ಥ ಡ್ಯಾಂನಿಂದ ಸರಬರಾಜು ಆಗುತ್ತಿರುವ ನೀರಿನ ಪೈಪಲೈನ್ ಮಾರ್ಗಮಧ್ಯದ ಗ್ರಾಮಗಳಾದ ಹಳಕಟ್ಟಿ, ಹೂಲಿ, ಇನ್ನಿತರ ಗ್ರಾಮಗಳ ಜನರು ಪೈಪಲೈನ್ ಸಂಪರ್ಕವನ್ನು ಯಾವ್ಯಾವುದೋ ಉಪಯೋಗಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಕಾರಣ ನರಗುಂದ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಪ್ರತಿಭಟನಾಕಾರರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಪ್ರಕಾಶ ಡಂಬಳ, ಖಂಡೂಬಾ ಮೋಟೆ, ಕಿರಣ ಜೋಗಣ್ಣವರ, ರೇಣುಕಾ ದ್ಯಾವನೂರ, ಶಿಲ್ಪಾ ಸುಣಗಾರ, ಪಾರ್ವತಿ ಸುಣಗಾರ, ರೋಷನಬೀ ನದಾಫ್, ರಿಯಾನಬೀ ನದಾಫ್, ಅಕ್ಕಮ್ಮ ದ್ಯಾವನೂರ, ರಾಜವ್ವ ಹೂಲಿಗೇರಿ, ಬಸವ್ವ ಗೊಂದಿ, ಜನ್ನತಬೀ ಬೀಳಗಿ, ನಾಗವ್ವ ಜಾಲಿಕಟ್ಟಿ, ಗಿರಿಜವ್ವ ದಾಟನಾಳ, ಲಕ್ಷ್ಮೀ ದಾಟನಾಳ, ದ್ಯಾಮವ್ವ ಕದಂ, ಪಾರವ್ವ ಕದಂ, ಸವಿತಾ ಕದಂ, ಜೋಗಣ್ಣವರ, ನಬಿಸಾಬ ಕಿಲ್ಲೇದಾರ, ಮುತ್ತು ಸುರಕೋಡ ಇತರರು ಇದ್ದರು.