ಸಾರಾಂಶ
ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ
ಕನ್ನಡಪ್ರಭ ವಾರ್ತೆ ತಿಪಟೂರುಮಹಿಳೆಯರ ಸ್ವಾವಲಂಬಿ ಜೀವನ ನಿರ್ವಹಣೆಗೆ ಮಹಿಳಾ ಸಬಲೀಕರಣಗಳಂತಹ ಕಾರ್ಯಕ್ರಮಗಳು ಅವಶ್ಯವಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸ್ವಾವಲಂಬಿ ಜೀವನಕ್ಕೆ ಮುಂದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧರ್ಮಸ್ಥಳ ಕೇಂದ್ರ ಕಚೇರಿಯ ಸಿಇಒ ಡಾ.ಎಲ್.ಎಚ್. ಮಂಜುನಾಥ್ ತಿಳಿಸಿದರು.
ನಗರದ ಹಳೇಪಾಳ್ಯದ ಗುರುಭವನ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ನಡೆಯುವ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಜ್ಞಾನವಿಕಾಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ಗುರುತಿಸಿಕೊಳ್ಳುವ ಮೂಲಕ ಪುರುಷರಿಗೆ ಸರಿಸಮರಾಗಿದ್ದಾರೆ. ಧರ್ಮಸ್ಥಳ ಸಂಘವು ಮಹಿಳೆಯರಲ್ಲಿ ಆರ್ಥಿಕ ಶಕ್ತಿ ತುಂಬುವ ಜತೆಗೆ ಅವರಲ್ಲಿ ಶಿಸ್ತು ಮೂಡಿಸುವ ಕೆಲಸ ಮಾಡುತ್ತಿದೆ. ಡಾ. ವೀರೆಂದ್ರ ಹೆಗ್ಡೆ ಅವರು ದೂರದೃಷ್ಟಿಯುಳ್ಳ ಯೋಜನೆಗಳನ್ನು ಜಾರಿಗೆ ತಂದು ಎಲ್ಲರ ಅಭ್ಯುದಯವನ್ನು ಬಯಸುತ್ತಿದ್ದಾರೆ. ಮಹಿಳೆಯರು ಯೋಜನೆಗಳ ಪ್ರಯೋಜನ ಪಡೆದುಕೊಂಡು ಆರ್ಥಿಕ ಸದೃಢರಾಗುವ ಮೂಲಕ ಸ್ವಸ್ಥ ಸಮಾಜ ನಿರ್ಮಿಸಬೇಕೆಂದರು.ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸಾ ಮಾತನಾಡಿ, ಮಹಿಳೆಯರಿಗೆ ಕಾನೂನಿನ ಅರಿವಿದ್ದರೆ ಮಾತ್ರ ದೌರ್ಜನ್ಯ, ದಬ್ಬಾಳಿಕೆಗಳನ್ನು ತಡೆಯಲು ಸಾಧ್ಯ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಸಮಾನಳಾಗಿ ನಿಲ್ಲಬೇಕಾದರೆ ಅದು ಶಿಕ್ಷಣ ಎಂಬ ಅಸ್ತ್ರ ಅವಶ್ಯಕ. ಮಹಿಳಾ ಸಬಲೀಕರಣವಾದಷ್ಟು ಮಹಿಳೆಗೆ ಶಕ್ತಿ ಹೆಚ್ಚಲಿದೆ. ಹೆಣ್ಣು ಮಕ್ಕಳಿಗೆ ಗರ್ಭಾವಸ್ಥೆಯಿಂದ ಕೊನೆಯವರೆಗೂ ಕಾನೂನಿನ ರಕ್ಷಣೆಯಿದೆ. ಭ್ರೂಣ ಹತ್ಯೆ ನಿಷೇಧ ಕಾಯ್ದೆ, ಶಿಕ್ಷಣ ಪಡೆಯುವ ಹಕ್ಕು, ವರದಕ್ಷಿಣೆ ನಿಷೇಧ ಕಾಯ್ದೆ, ಆಸ್ತಿ ಹಕ್ಕು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ, ಹಣ್ಣಿನ ಮೇಲಾಗುವ ದೌರ್ಜನ್ಯಗಳಿಗೆ ಪರಿಹಾರ ಪಡೆಯಲು ಇರುವ ಕಾನೂನಾತ್ಮಕ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಎಂ.ಎಸ್. ಸ್ವರ್ಣಗೌರಿ ಮಾತನಾಡಿ, ಮಹಿಳೆಯರು ಅಡುಗೆ ಮನೆಗಷ್ಟೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಗಣನೀಯ ಸೇವೆ ಸಲ್ಲಿಸುವ ಮೂಲಕ ಕುಟುಂಬವನ್ನು ತಾವೇ ನಿರ್ವಹಿಸಿಕೊಂಡು ಆದರ್ಶ ಮಹಿಳೆಯಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತಿದ್ದಾಳೆ. ಮಹಿಳೆಯರು ಮತ್ತಷ್ಟು ಸಬಲಳಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಟೋ ತರಬೇತಿ ಪಡೆದ ಮಹಿಳೆಯರಿಗೆ ಡ್ರೈವಿಂಗ್ ಲೈಸನ್ಸ್ ಹಾಗೂ ಸಂಘದ ಸದಸ್ಯರಿಗೆ ಪ್ರಧಾನ ಮಂತ್ರಿ ಸಾಕ್ಷರತಾ ದಿಶಾ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀನಪ್ಪ, ಆಡಳಿತ ಯೋಜನಾಧಿಕಾರಿ ಸುಕೇಶ್, ಜಿ. ಯೋಜನಾಧಿಕಾರಿ ಸುರೇಶ್, ತಾ. ಯೋಜನಾಧಿಕಾರಿ ಉದಯ್, ಕೆ. ಸುರೇಶ್, ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಸಂಧ್ಯಾಶೆಟ್ಟಿ, ತಾ. ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಭಾಗ್ಯಲಕ್ಷ್ಮಿ ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು, ತಾಲೂಕಿನ ಎಲ್ಲಾ ಮೇಲ್ವಿಚಾರಕರು, ಕಚೇರಿಯ ಸಿಬ್ಬಂದಿ, ಸೇವಾ ಪ್ರತಿನಿಧಿಗಳು, ಜ್ಞಾನ ವಿಕಾಸ ಕೇಂದ್ರಗಳ ಸದಸ್ಯರು ಭಾಗವಹಿಸಿದ್ದರು.
ಬಾಕ್ಸ್..........ಮಹಿಳೆಯರಿಗಾಗಿ ಹಲವಾರು ಕಾನೂನು ಕಾಯ್ದೆಗಳಿದ್ದು ಇವುಗಳ ಬಗ್ಗೆ ಮಾಹಿತಿ ಪಡೆದು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಪಡೆದುಕೊಳ್ಳಬೇಕು. ಅಸಹಾಯಕತೆ, ಕೀಳರಿಮೆ, ತಾತ್ಸಾರ ಮನೋಭಾವ ಬಿಟ್ಟು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ನಿರ್ದಿಷ್ಟ ಗುರಿಯೊಂದಿಗೆ ಸಮಾಜದಲ್ಲಿ ಸ್ಥಾನಮಾನ ಪಡೆದುಕೊಂಡು ಸದೃಢ ಬದುಕು ಕಟ್ಟಿಕೊಳ್ಳಬೇಕು.ನೂರುನ್ನೀಸಾ, ಹಿರಿಯ ಸಿವಿಲ್ ನ್ಯಾಯಾಧೀಶೆ ------- 4-ಟಿಪಿಟಿ3ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯನ್ನು ಉದ್ಘಾಟಿಸಿದ ಸಿಇಒ ಡಾ. ಎಲ್. ಹೆಚ್. ಮಂಜುನಾಥ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ. ಜತೆಗೆ ಮತ್ತಿತರರು ಇದ್ದರು.