ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಹಿಳಾ ಮೀಸಲಾತಿ ವಿಷಯದಲ್ಲಿ ದೇಶದ ಮಹಿಳೆಯರನ್ನು ದಾರಿ ತಪ್ಪಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಬುಧವಾರ ಬಾಗಲಕೋಟೆಯಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಬಸವೇಶ್ವರ ವ್ರತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಹಲವರು ಭಾಗವಹಿಸಿ ಮಹಿಳಾ ಮೀಸಲಾತಿ ವಿಷಯದಲ್ಲಿ ದೇಶದ ಮಹಿಳೆಯರನ್ನು ದಾರಿ ತಪ್ಪಿಸುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯನ್ನು ಖಂಡಿಸಿದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಸರ್ಕಾರದ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮಿತ್ರಾ ಗುಳಬಾಳ, 2023ರಲ್ಲಿ ಮಹಿಳಾ ಮೀಸಲಾತಿ ಬಿಲ್ ಲೋಕಸಭೆಯಲ್ಲಿ ಪಾಸಾಗಿದ್ದರೂ ಕಳೆದ 3 ವರ್ಷಗಳಿಂದ ಮಹಿಳಾ ಮೀಸಲಾತಿ ಜಾರಿಗೆ ತರುವಲ್ಲಿ ವಿಫಲವಾದ ಬಿಜೆಪಿ ಸರ್ಕಾರ, ಇದೀಗ ಚುನಾವಣಾ ಲಾಭಕ್ಕಾಗಿ ಮಾತ್ರ ಈ ವಿಚಾರವನ್ನು ಬಳಸಿಕೊಂಡಿದೆ. ಈ ಮೂಲಕ ಮಹಿಳೆಯರಿಗೆ ಸುಳ್ಳು ಭರವಸೆ ನೀಡುತ್ತಿದೆ ಎಂದು ತೀವ್ರವಾಗಿ ಆರೋಪಿಸಿದರು. ಮಹಿಳೆಯರ ಹಕ್ಕುಗಳ ವಿಷಯದಲ್ಲಿ ಬಿಜೆಪಿ ಸರ್ಕಾರದ ನಿಷ್ಠೆ ಇಲ್ಲ ಎಂದು ಅವರು ಆರೋಪಿಸಿದರು.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಮಹಿಳೆಯರ ಸಬಲೀಕರಣದ ಹೆಸರಿನಲ್ಲಿ ಬಿಜೆಪಿ ಕೇವಲ ಜಾಹೀರಾತು ರಾಜಕಾರಣ ಮಾಡುತ್ತಿದೆ. ನಿಜವಾದ ಮೀಸಲಾತಿ ಜಾರಿಗೆ ಸ್ಪಷ್ಟ ಸಮಯಸೀಮೆ ನೀಡಲು ಸರ್ಕಾರ ಮುಂದಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮಹಿಳಾ ಮೀಸಲಾತಿ ಜಾರಿಗೆ ತಂದಿರುವುದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಪ್ರತಿಭಟನೆಯ ವೇಳೆ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬಿಜೆಪಿ ಸರ್ಕಾರದ ಮಹಿಳಾ ವಿರೋಧಿ ನೀತಿಯನ್ನು ತೀವ್ರವಾಗಿ ಖಂಡಿಸಿ, ಮಹಿಳೆಯರಿಗೆ ನ್ಯಾಯ ಬೇಕು - ರಾಜಕೀಯ ನಾಟಕ ಬೇಡ, ಹಕ್ಕು ಕೊಡದ ಬಿಜೆಪಿ - ಮಾತಿನ ಮಳೆ ಮಾತ್ರ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷ ಎಸ್.ಎನ್.ರಾಂಪೂರ, ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ಜಿಪಂ ಮಾಜಿ ಸದಸ್ಯೆ ಹನಮವ್ವ ಕರೋಳ್ಳಿ, ಮಂಜುಳಾ ಭುಸಾರೆ, ಮುಮತಾಜ ಸುತಾರ, ಸುಧಾ ಪಾಟೀಲ, ಗಂಗೂಬಾಯಿ ಚವ್ಹಾಣ, ಗುಣವಂತಿ ನಿಡೋಣಿ, ಮಾಬೂಬಿ ತುರೇದ, ಜೈಬುನಿ ಇಲಕಲ್ಲ, ಮಾಬೂಬಿ ಬೈರತಿಗಾರ, ಅಡಿವೆಪ್ಪ ಚಂದಾವರಿ, ಸುಭಾಷ ಬದಾಮಿ, ಮಲ್ಲು ಒಡಗೇರಿ, ಧರ್ಮಣ್ಣ ಚಲವಾದಿ ಸೇರಿದಂತೆ ಪದಾಧಿಕಾರಿಗಳು ಹಾಗೂ ಅನೇಕ ಕಾರ್ಯಕರ್ತೆಯರು ಭಾಗವಹಿಸಿದ್ದರು.
----------------ಬಾಕ್ಸ್....ಕನ್ನಡಪ್ರಭ ವರದಿ ಹಿಡಿದು ಪ್ರತಿಭಟನೆ
ಮಹಿಳಾ ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರದ ದ್ವಂದ್ವ ನೀತಿ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ವೇಳೆ ಕನ್ನಡಪ್ರಭದಲ್ಲಿ ಮಹಿಳಾ ಮೀಸಲಾತಿ ಕುರಿತು ಮಾರ್ಗರೆಟ್ ಆಳ್ವ ನೀಡಿರುವ ಹೇಳಿಕೆಯ ವರದಿಯನ್ನು ಹಿಡಿದುಕೊಂಡು ಪ್ರತಿಭಟಿಸಿದರು