ದಾಬಸ್‍ಪೇಟೆ: ರಾಗಿ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವಾಗಿದ್ದು, ಸಾರ್ವಜನಿಕರು ಹೆಚ್ಚು ಬಳಸಬೇಕು. ರಾಗಿಯಿಂದ ಹೊಸ ಪದಾರ್ಥಗಳನ್ನು ತಯಾರಿಸಿ, ಗುಣಮಟ್ಟ ಕಾಪಾಡಿಕೊಂಡು ಮಾರುಕಟ್ಟೆ ಮಾಡಬೇಕು. ಗ್ರಾಮೀಣ ಮಹಿಳೆಯರು ಸ್ವಾವಲಂಬನೆ ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಜಿಕೆವಿಕೆಯ ಕೃಷಿ ವಿಜ್ಞಾನಿ ಸುರೇಶ್ ಹೇಳಿದರು.

ದಾಬಸ್‍ಪೇಟೆ: ರಾಗಿ ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವಾಗಿದ್ದು, ಸಾರ್ವಜನಿಕರು ಹೆಚ್ಚು ಬಳಸಬೇಕು. ರಾಗಿಯಿಂದ ಹೊಸ ಪದಾರ್ಥಗಳನ್ನು ತಯಾರಿಸಿ, ಗುಣಮಟ್ಟ ಕಾಪಾಡಿಕೊಂಡು ಮಾರುಕಟ್ಟೆ ಮಾಡಬೇಕು. ಗ್ರಾಮೀಣ ಮಹಿಳೆಯರು ಸ್ವಾವಲಂಬನೆ ಜೊತೆಗೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಜಿಕೆವಿಕೆಯ ಕೃಷಿ ವಿಜ್ಞಾನಿ ಸುರೇಶ್ ಹೇಳಿದರು.

ಸೋಂಪುರ ಹೋಬಳಿಯ ಕಲ್ಲನಾಯಕನಹಳ್ಳಿ ಗ್ರಾಮದಲ್ಲಿ ಸೋಂಪುರ ರೈತ ಸಂಪರ್ಕ ಕೇಂದ್ರದ ವತಿಯಿಂದ ಏರ್ಪಡಿಸಿದ್ದ 2025-26ನೇ ಸಾಲಿನ ರಾಗಿ ಬೆಳೆ ಪದ್ಧತಿ ಆಧಾರಿತ ತರಬೇತಿ, ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ರಾಗಿ ಬೆಳೆ ಕ್ಷೇತ್ರೋತ್ಸವ ಹಾಗೂ 2025-26ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ತೊಗರಿ ಬೇಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಂ ಆರ್ 1, ಎಂ ಆರ್ 6, ಎಂಎಲ್ 361, ಜಿಪಿಯು 66 ಎಂಬ ರಾಗಿ ತಳಿಗಳು ಈ ಭಾಗದಲ್ಲಿ ಹೆಚ್ಚು ಬೆಳೆಯಲಾಗುತ್ತಿದೆ. ಜಿಪಿಯು 66 ಹರಳು ಮಾಡಲು ಸೂಕ್ತವಾಗಿದ್ದು, ಆ ತಳಿಯನ್ನು ಉಳಿಸಿಕೊಂಡು ಹುರಿಯಿಟ್ಟು ಮಾಡುವ ಕಂಪನಿಗಳಿಗೆ ಮಾರಾಟ ಮಾಡಿ ಹೆಚ್ಚು ಲಾಭ ಮಾಡಬಹುದು. ಇನ್ನು ಈಗಾಗಲೇ ಕೃಷಿ ವಿಶ್ವ ವಿದ್ಯಾಲಯದಲ್ಲಿ ಎಂಎಲ್362 ಎಂಬ ಹೊಸ ರಾಗಿ ತಳಿ ಬಿಡುಗಡೆ ಮಾಡಲಾಗಿದೆ. ಇದು ಬುಡ ಗಟ್ಟಿಯಾಗಿದ್ದು, ಬೇಗ ಬೀಳಲ್ಲ. ರಾಗಿ ಕಟಾವು ಮಾಡಲು ಅನುಕೂಲ. ಅಲ್ಲದೆ ರಾಗಿ ಕಾಳು ದೊಡ್ಡದಾಗಿರುತ್ತದೆ. ಎಕರೆಗೆ 10 ಕ್ವಿಂಟಾಲ್ ರಾಗಿ 2 ಟನ್ ಹುಲ್ಲು ಸಿಗುತ್ತದೆ. ರುಚಿ ವಿಷಯದಲ್ಲೂ ಚೆನ್ನಾಗಿದೆ ಎಂದು ಹೇಳಿದರು.

ಕೃಷಿ ಇಲಾಖೆಯಿಂದ ತೊಗರಿ ಬಿಆರ್ ಜಿ 5 ಎಲ್ಲಾ ಕಡೆ ಚೆನ್ನಾಗಿ ಬೆಳೆ ಬಂದಿದೆ. ಇದು ಪಾಲಿಶ್ ಮಾಡಿಸದೆ ತೊಗರಿ ಬೇಳೆ ಉಪಯೋಗಿಸಬೇಕು. ಮಹಿಳೆಯರು ಸಂಘಗಳ ಮೂಲಕ ತೊಗರಿ ಬೇಳೆ ಮಾಡಿಸುವ ಯಂತ್ರಗಳನ್ನು ಹಾಕಿಕೊಳ್ಳಲು ಅವಕಾಶವಿದ್ದು, ಇಂತಹ ಅವಕಾಶ ಮತ್ತು ಅನುಕೂಲಗಳನ್ನು ಮಹಿಳೆಯರು ಸದ್ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ಅಧಿಕಾರಿ ಪ್ರಭು ಮಾತನಾಡಿ, ರೈತರು ರಾಗಿ ತಿನ್ನಬೇಕು. ಅದರಲ್ಲಿ ನಾರಿನಂಶ ಹೆಚ್ಚಿದೆ. ಮುಖ್ಯವಾಗಿ ಔಷಧಿ ಸಿಂಪಡಿಸುವುದಿಲ್ಲ. ರಾಸಾಯನಿಕ ಔಷಧಿ ಸಿಂಪಡಣೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಹಸಿರೆಲೆ ಗೊಬ್ಬರ, ಹಟ್ಟಿ ಗೊಬ್ಬರದ ಮೂಲಕ ಅದನ್ನು ಕಾಪಾಡಬೇಕು. ಬೇರೆ ಬೇರೆ ಪದ್ಧತಿ ಮೂಲಕ ಕೃಷಿ ಮಾಡಬೇಕು. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಗೊಬ್ಬರ ಸಿಗುತ್ತೆ, ಲಘು ಪೋಷಕಾಂಶಗಳು, ಬೇವಿನ ಎಣ್ಣೆ ಸಹಾಯದನದಲ್ಲಿ ಸಿಗುತ್ತೆ ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕೃಷಿಕ ಸಮಾಜದ ನಿರ್ದೇಶಕ ಗುರುರಾಜ್ ಮಾತನಾಡಿ, ರೈತರು ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ನೈಸರ್ಗಿಕ ಕೃಷಿಯಿಂದ ಮಣ್ಣು ಮತ್ತು ಮನುಷ್ಯರ ಆರೋಗ್ಯವನ್ನು ಕಾಪಾಡಬಹುದು. ಇಂದಿನ ದಿನಗಳಲ್ಲಿ ಹೆಚ್ಚು ರೋಗಗಳಿಗೆ ತುತ್ತಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಸಾವಯವ ಉತ್ಪನ್ನಗಳನ್ನು ಬಳಸುವುದರಿಂದ ಆದಷ್ಟು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ಅಧಿಕಾರಿ ಪ್ರಭು, ವೀಣಾ, ಕೃಷಿ ಸಮಾಜದ ಖಜಾಂಚಿ ನಾಗಣ್ಣ, ಪ್ರಗತಿಪರ ರೈತರಾದ ವೆಂಕಟಪ್ಪ, ಮೂಡ್ಲಪ್ಪ, ರೈತ ಮಹಿಳೆಯರು, ಸಾರ್ವಜನಿಕರು ಭಾಗವಹಿಸಿದ್ದರು.

ಪೋಟೋ 3 : ಸೋಂಪುರ ಹೋಬಳಿಯ ಕಲ್ಲನಾಯಕನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಗಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಜಿಕೆವಿಕೆಯ ಕೃಷಿ ವಿಜ್ಞಾನಿ ಸುರೇಶ್ ಚಾಲನೆ ನೀಡಿದರು.