ಕುಕನೂರು: ಕಾರ್ಮಿಕರಿಗೆ ಸೇವಾ ಭದ್ರತೆ ದೊರೆಯಲಿ ಎಂದು ಶ್ರೀರುದ್ರಮುನಿಶ್ವರ ಹಮಾಲರ ಮತ್ತು ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ನಿಂಗಪ್ಪ ಗೋರ್ಲೆಕೊಪ್ಪ ಹೇಳಿದರು.
ಪಟ್ಟಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಶ್ರೀರುದ್ರಮುನಿಶ್ವರ ಹಮಾಲರ ಮತ್ತು ಕಾರ್ಮಿಕ ಸಂಘದಿಂದ ಜರುಗಿದ ಮೆರವಣಿಗೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಾನವ ಸಮಾಜದ ಬೆಳವಣಿಗೆಯ ಹಾದಿಯಲ್ಲಿ ಶ್ರಮವೇ ಮೂಲಾಧಾರ. ಕರುಣೆ ಮತ್ತು ಸಮಾನತೆಯೇ ಮಾರ್ಗದರ್ಶಕ. ಕಾರ್ಮಿಕರ ದಿನ ಶ್ರಮಜೀವಿಗಳ ಹಕ್ಕು, ಗೌರವ ಮತ್ತು ಸಮಾನತೆಯ ಸಂಕೇತ. ಪ್ರತಿಯೊಬ್ಬ ಕಾರ್ಮಿಕ ಬೆವರು ಹರಿಸಿ ದೇಶದ ಬೆಳವಣಿಗೆಗೆ ಶ್ರಮಿಸುತ್ತಾನೆ. ಅವರಿಗೆ ಸೇವಾ ಭದ್ರತೆ, ಸೂಕ್ತ ವೇತನ, ಸರ್ಕಾರಿ ನೌಕರರಂತೆ ಎಲ್ಲ ಸೌಲಭ್ಯ ದೊರಕಬೇಕು ಎಂದರು.ನಮಿಸುವ ಕೈಗಳಿಗಿಂತ,ದುಡಿಯುವ ಕೈಗಳು ಶ್ರೇಷ್ಠ. ದುಡಿಯುವ ವರ್ಗ ಕನಿಷ್ಠ ಮತ್ತು ದುಡಿಸಿಕೊಳ್ಳುವ ವರ್ಗ ಗರಿಷ್ಠ ಎಂಬ ಮನೋಭಾವನೆ ತೆಗೆದು ಕಾಯಕಕ್ಕೆ ದೈವತ್ವದ ಸ್ಥಾನ ನೀಡಿದ ಬಸವಾದಿ ಶರಣರ ಕೊಡುಗೆ ಅನನ್ಯವಾಗಿದೆ.ಡಾ. ಬಾಬಾಸಾಹೇಬ್ ಅಂಬೇಡ್ಕರ್ ಕಾರ್ಮಿಕರ ಹಿತರಕ್ಷಣೆಗಾಗಿ ಸಂವಿಧಾನದ ಮೂಲಕ ಕಾನೂನು ನೀಡಿದ್ದಾರೆ. ಕಾಯಕ ಜೀವಿಗಳ ಕೊಡುಗೆ ಸಮಾಜ ಎಂದಿಗೂ ಕೂಡಾ ಮರೆಯುವಂತಿಲ್ಲ ಎಂದರು.
ನಿವೃತ್ತರಾದ ನಾಲ್ವರು ಹಮಾಲರಿಗೆ ಸನ್ಮಾನಿಸಿ ಗೌರವಿಸಲಾಯಿತು.ಸಂಘದ ಉಪಾಧ್ಯಕ್ಷ ವಿರುಪಾಕ್ಷಪ್ಪ ಭಂಡಾರಿ, ಪದಾಧಿಕಾರಿ ದೇವಪ್ಪ ಗುಡದಳ್ಳಿ, ದೊಡ್ಡ ಈರಪ್ಪ ಆರುಬೆರಳಿನ, ತಿರುಪತಿ ಮಾನ್ವಿ, ಶರಣಪ್ಪ ಹಿರೇಕೊಪ್ಪ, ಮಾರುತಿ, ಬಸವರಾಜ ಅಣ್ಣಿಗೇರಿ, ಮಹಾಂತೇಶ್ ಆರುಬೆರಳಿನ, ಪರಶುರಾಮ, ಸಂಘದ ಸದಸ್ಯರು ಇತರರು ಇದ್ದರು.