ಕೊಪ್ಪಳ: ಸಮಾಜದ ಪ್ರಗತಿಗೆ ಕಾರ್ಮಿಕರ ಪರಿಶ್ರಮ ಅಪಾರ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ ಹೇಳಿದರು.

ನಗರದ ಶ್ರೀವೀರಭದ್ರೇಶ್ವರ ವಿಕಲಚೇತನರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯಾಲಯದಲ್ಲಿ ಜರುಗಿದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರು ಹಗಲಿರುಳು ಎನ್ನದೇ ನಿರಂತರವಾಗಿ ದುಡಿಯುತ್ತಿದ್ದು, ಅವರಿಗೆ ಇನ್ನೂ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯ ಸಿಗಬೇಕಿದೆ ಎಂದರು.

ಯಾವುದೇ ಅಹಂ ಭಾವನೆ ಇಲ್ಲದೆ ಕಾರ್ಮಿಕ ವರ್ಗ ಶ್ರಮಪಡುತ್ತಾರೆ.ಅವರ ಶ್ರಮಕ್ಕೆ ಸಂಬಳ ನೀಡಿದ್ದೇವೆ ಎಂಬ ಭಾವನೆ ಮಾತ್ರ ಮಾಲೀಕರಲ್ಲಿ ಇರುತ್ತದೆ. ಆದರೆ ಅವರೇ ಶ್ರಮ ಪಡದಿದ್ದರೆ ಮಾಲೀಕರ ಅಸ್ತಿತ್ವ ಇರುತ್ತಿರಲಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪ್ರಸಾದ, ಕಾರ್ಮಿಕರು ತೆರೆಯ ಹಿಂದಿನ ಹೀರೋ. ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಉದ್ಯೋಗ ಭದ್ರತೆಯಲ್ಲಿ ಕನಿಷ್ಠ ಸೌಲಭ್ಯಗಳಿದ್ದು, ಸರ್ಕಾರ ನೀತಿ ನಿಯಮ ಬದಲಾವಣೆ ತಂದು ಅವರ ಶ್ರೇಯೋಭಿವೃದ್ಧಿಗೆ ಕಾರ್ಯ ನಿರ್ವಹಿಸಬೇಕು ಎಂದರು.

ಈ ವೇಳೆ ನಗರಸಭೆ ಪೌರ ಕಾರ್ಮಿಕ ಶಿವಪ್ಪ ಗಿಣಿಗೇರಿ, ಖಾಸಗಿ ಹೊಟೇಲ್‌ನ ವಿಕಲಚೇತನ ಮಾಲೀಕ ಶಿವಣ್ಣ, ವಿಕಲಚೇತನರ ಸಾಧನ ಸಲಕರಣೆಗಳ ತಯಾರಕ ಬಸವರಾಜ ಕೋಮಾರಗೆ ಸಂಸ್ಥೆದಿಂದ ಸನ್ಮಾನಿಸಿ ಗೌರವಿಸಲಾಯಿತು.


ಸಂಸ್ಥೆಯ ಅಧ್ಯಕ್ಷ ಈರಪ್ಪ ಕರೇಕುರಿ, ರಾಜ್ಯ ವಿಕಲಚೇತನರ ಒಕ್ಕೂಟದ ಉಪಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಮಂಜುನಾಥ ಹೊಸಕೇರಾ, ವೆಂಕಟೇಶ, ಮಲ್ಲಪ್ಪ ಗುತ್ತಿ, ಯಮನೂರಪ್ಪ ಕಾಗೇರಿ, ರಾಘವೇಂದ್ರ, ಷಣ್ಮುಖಪ್ಪ ಮತ್ತಿತರಿದ್ದರು.