ಕಾರವಾರ: ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ''''''''ಸಮಾಧಾನ ಸಮಾರೋಹ-2026'''''''' ಎಂಬ ವಿಶೇಷ ಲೋಕ ಅದಾಲತ್‌ನ್ನು ಆ. 21, 22 ಮತ್ತು 23ರಂದು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ. ಹೇಳಿದರು.
ಅವರು ಗುರುವಾರ ಜಿಲ್ಲಾ ನ್ಯಾಯಾಲಯದ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಮಾತನಾಡಿದರು.ಸರ್ವೋಚ್ಚ ನ್ಯಾಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ 34 ಪ್ರಕರಣಗಳಿವೆ. ಅವುಗಳಲ್ಲಿ 17 ಕೌಟುಂಬಿಕ, 9 ಸಿವಿಲ್, 2 ಮೋಟಾರು ವಾಹನ ಅಪಘಾತ ಪರಿಹಾರ, 1 ಭೂ ಸ್ವಾಧೀನ, 1 ಕಾರ್ಮಿಕ ವಿವಾದ, 1 ಚೆಕ್ ಅಮಾನ್ಯ, 2 ತೆರಿಗೆ ಹಾಗೂ 1 ಸರ್ವೀಸ್‌ಗೆ ಸಂಬಂಧಿಸಿದ ಪ್ರಕರಣಗಳನ್ನು ಗುರುತಿಸಲಾಗಿದೆ. ಈ ಪ್ರಕರಣಗಳನ್ನು ಆ. 21ರಿಂದ ಆ. 23ರ ವರೆಗೆ ನಡೆಯುವ ಸಮಾಧಾನ ಸಮಾರೋಹ್ ವಿಶೇಷ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯ ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ವಿಶೇಷ ಲೋಕ ಅದಾಲತ್ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಹಾಗೂ ಸಾರ್ವಜನಿಕರ ಸರ್ವೋಚ್ಚ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಈ ಅದಾಲತ್‌ನಲ್ಲಿ ಸೇರಿಸಲು ಗೂಗಲ್ ಶೀಟ್ ಲಿಂಕ್ ಮೂಲಕ ಅಥವಾ ಹತ್ತಿರದ ತಾಲೂಕು ಮತ್ತು ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮೂಲಕ ಸೇರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.ಸವೋಚ್ಚ ನ್ಯಾಯಾಲಯ ಪ್ರಥಮ ಬಾರಿಗೆ ಸಮಾಧಾನ ಸಮಾರೋಹ್ ವಿಶೇಷ ಲೋಕ ಅದಾಲತ್ ದೇಶದಾದ್ಯಂತ ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.