ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ನೇತೃತ್ವದಲ್ಲಿ ಸುಭಾಷ್ ನಗರದಲ್ಲಿರುವ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಾಹನದಲ್ಲಿ ಕರೆದೊಯ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಸಿಲುಕಿಸಲು ಜಾರಿ ನಿರ್ದೇಶನಾಲಯವನ್ನು (ಇಡಿ) ಅನಗತ್ಯವಾಗಿ ಬಳಸಿಕೊಂಡು ಕೇಂದ್ರ ಸರ್ಕಾರ ಪಿತೂರಿ ನಡೆಸಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಬಂದೀಗೌಡ ಬಡಾವಣೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ನೇತೃತ್ವದಲ್ಲಿ ಸುಭಾಷ್ ನಗರದಲ್ಲಿರುವ ಬಿಜೆಪಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಕಚೇರಿಗೆ ನುಗ್ಗಲು ಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದು ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಾಹನದಲ್ಲಿ ಕರೆದೊಯ್ದರು.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್ ಮಾತನಾಡಿ, ಬಿಜೆಪಿ ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ. ಮುಂದಿನ ದಿನಗಳಲ್ಲಿ ದೇಶದ ಜನ ಬಿಜೆಪಿಯವರಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ದ್ವೇಷದ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಕಾಂಗ್ರೆಸ್ ಪಕ್ಷ ಕ್ರಾಂತಿಯನ್ನು ಮಾಡುತ್ತದೆ. ಪ್ರತಿ ಸಂದರ್ಭದಲ್ಲೂ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಸುಪ್ರೀಂಕೋರ್ಟ್ ಹಾಗೂ ಕಾನೂನನ್ನು ಧಿಕ್ಕರಿಸುವ ಮೂಲಕ ನರೇಂದ್ರಮೋದಿ ಅವರು ದ್ವೇಷ ಹಾಗೂ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಇನ್ನಾದರೂ ಇಂತಹ ಪ್ರಯತ್ನವನ್ನು ಕೈ ಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ.ಎಂ.ದ್ಯಾವಪ್ಪ, ಕಿಸಾನ್ ಘಟಕದ ಚಿನಕುರುಳಿ ರಮೇಶ್, ಕೃಷ್ಣೇಗೌಡ, ಎಸ್ಸಿ/ಎಸ್ಟಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ಶ್ರೀಧರ್, ಚಿಕ್ಕಬಳ್ಳಿ ಕೃಷ್ಣ, ಶಬರಿನ್ ತಾಜ್, ಪದ್ಮಾ ಮೋಹನ್, ಬಸರಾಳು ಕೃಷ್ಣೇಗೌಡ, ಅಭಿಲಾಶ್, ಕಿರಣ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಪರೇಡ್ ಮೈದಾನದಲ್ಲಿರಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಧ್ಯಾಹ್ನದ ಬಳಿಕ ಬಿಡುಗಡೆ ಮಾಡಿದರು.