ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವಾಣಿಜ್ಯ, ಕೈಗಾರಿಕೆ, ಧಾರ್ಮಿಕ, ಔದ್ಯೋಗಿಕ, ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ, ದಾವಣಗೆರೆ ಜೀವಂತ ದಂತಕಥೆ ಎನಿಸಿರುವ ದಿ.ಡಾ.ಶಾಮನೂರು ಶಿವಶಂಕರಪ್ಪ ಅಧ್ಯಯನ ಪೀಠವನ್ನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುವಂತೆ ಮೈಕ್ರೋಬಿ ಫೌಂಡೇಷನ್ ಜಿಲ್ಲಾ ಸಂಚಾಲಕ ಮಹದೇವಪ್ಪ ದಿದ್ದಿಗೆ ಒತ್ತಾಯಿಸಿದ್ದಾರೆ.

- ವಿದ್ಯಾರ್ಥಿಗಳಿಗೆ ಎಸ್‌ಎಸ್‌ ಸ್ಫೂರ್ತಿ ವಿಚಾರಧಾರೆಗಳು ಪಠ್ಯವಾಗಲಿ: ಮಹದೇವಪ್ಪ ದಿದ್ದಿಗೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ವಾಣಿಜ್ಯ, ಕೈಗಾರಿಕೆ, ಧಾರ್ಮಿಕ, ಔದ್ಯೋಗಿಕ, ರಾಜಕೀಯ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ, ದಾವಣಗೆರೆ ಜೀವಂತ ದಂತಕಥೆ ಎನಿಸಿರುವ ದಿ.ಡಾ.ಶಾಮನೂರು ಶಿವಶಂಕರಪ್ಪ ಅಧ್ಯಯನ ಪೀಠವನ್ನು ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಆರಂಭಿಸುವಂತೆ ಮೈಕ್ರೋಬಿ ಫೌಂಡೇಷನ್ ಜಿಲ್ಲಾ ಸಂಚಾಲಕ ಮಹದೇವಪ್ಪ ದಿದ್ದಿಗೆ ಒತ್ತಾಯಿಸಿದ್ದಾರೆ.

ಶಿಕ್ಷಣ ಸಂಸ್ಥೆಯೊಂದರ ನೇತೃತ್ವ ವಹಿಸಿಕೊಂಡು, ನೂರಾರು ಅಂಗ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ವಿದ್ಯಾದಾನಕ್ಕೆ ಒತ್ತು ನೀಡಿದವರು ಶಾಮನೂರು ಶಿವಶಂಕರಪ್ಪ. ನಾಲ್ಕಾರು ಆಸ್ಪತ್ರೆಗಳನ್ನು ಸ್ಥಾಪಿಸಿ, ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಗಮನ ಹರಿಸಿದ್ದವರು. ಇಂತಹ ಹಿರಿಯರ ಸಾಧನೆ, ಕೊಡುಗೆಯನ್ನು ವಿವರಿಸಲು ಪದಗಳು ಸಾಲದು. ಇಂತಹ ಸಾಧಕರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸುವ ಕೆಲಸ ಆಗಬೇಕು ಎಂದಿದ್ದಾರೆ.

ಸಂಸಾರವಿಲ್ಲದೇ ದೇಶವನ್ನು ಆಳುವುದು ಸುಲಭವೆಂದು ನರೇಂದ್ರ ಮೋದಿ ಅವರನ್ನು ನೋಡಿದ ಮೇಲೆ ನಿಜವೆನಿಸಿತು. ತುಂಬು ಕುಟುಂಬದಲ್ಲಿದ್ದುಕೊಂಡು, ಸಂಸಾರವನ್ನೂ ಸರಿದೂಗಿಸಿಕೊಂಡು, ಪತ್ನಿ, ಮಕ್ಕಳು, ಸಮಾಜ, ವ್ಯಾಪಾರ, ಉದ್ಯಮ, ಶಿಕ್ಷಣ, ಕೃಷಿ, ರಾಜಕೀಯ ಹೀಗೆ ಎಲ್ಲವನ್ನೂ ಮುನ್ನಡೆಸಿಕೊಂಡು, ವೈಯಕ್ತಿಕ ಜೀವನ ನಡೆಸಿದವರು ಎಸ್‌.ಎಸ್‌. ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ, ಮೂರು ತಲೆಮಾರಿನ ಕೊಂಡಿಯಾಗಿದ್ದ ಅವರ ಹೆಸರಿನಲ್ಲಿ ಅಧ್ಯಯನ ಪೀಠದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಮನೂರು ಶಿವಶಂಕರಪ್ಪ ಅಂದರೆ ಒಬ್ಬ ವ್ಯಕ್ತಿಲ್ಲ, ಸಮಾಜದ ದೈತ್ಯಶಕ್ತಿ. ನಾನೊಬ್ಬ ತರಳಬಾಳು ಮಠದ ಪರಮಭಕ್ತ, ವಿದ್ಯಾರ್ಥಿ. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಆದರ್ಶವಾಗಿ ಸ್ವೀಕರಿಸಿ, ಬಾಳುತ್ತಿದ್ದೇನೆ. ನನಗೆ ಬುದ್ಧಿ ಬಂದಾಗಿನಿಂದಲೂ ತರಳಬಾಳು ಹುಣ್ಣಿಮೆ ಎಲ್ಲೆಲ್ಲಿ ನಡೆಯುತ್ತದೆಯೋ ಅಲ್ಲಿ ಕೊನೆಯ ದಿನ ಶಾಮನೂರು ಶಿವಶಂಕರಪ್ಪ ಅವರಿಂದ ಏನಾದರೂ ವಾಗ್ದಾನ ಇರುತ್ತಿತ್ತು. ಸಮಾಜೋಪಯೋಗಿ ಕೆಲಸಕ್ಕೆ ಆ ಹಿರಿಯರ ವಾಗ್ದಾನ ಇರುತ್ತಿತ್ತು. ಆ ವಾಗ್ದಾನಗಳು ಕೇವಲ ವಾಗ್ದಾನ ಆಗಿರದೇ, ಕಾರ್ಯರೂಪಕ್ಕೆ ಬರುತ್ತಿದ್ದವು ಎಂದು ತಿಳಿಸಿದ್ದಾರೆ.

ಉನ್ನತ ಅಧ್ಯಯನದವರೆಗೂ ಸಹ ಪಠ್ಯಗಳಲ್ಲಿ ಶಾಮನೂರು ಕುರಿತ ವಿಚಾರಧಾರೆಗಳಿರಬೇಕು. ರಾಜಕಾರಣಿಗಳು, ವಿಚಾರವಂತರು, ಬುದ್ಧಿಜೀವಿಗಳು, ಮಠಾಧಿಪತಿಗಳು ಶಾಮನೂರು ಅವರ ಬದುಕು, ಬರಹವನ್ನು ಹೊಗಳುವುದಕ್ಕಷ್ಟೇ ಸೀಮಿತಗೊಳಿಸದೇ, ಇತಿಹಾಸದ ಪುಟಕ್ಕೆ ಸೇರಿಸಬೇಕು. ಈ ಬಗ್ಗೆ ದಾವಣಗೆರೆ ವಿವಿ ತ್ವರಿತವಾಗಿ ಅಧ್ಯಯನ ಪೀಠ ಸ್ಥಾಪಿಸಲಿ ಎಂದು ಮಹದೇವಪ್ಪ ದಿದ್ದಿಗೆ ಮನವಿ ಮಾಡಿದ್ದಾರೆ.

- - -

-18ಕೆಡಿವಿಜಿ1.ಜೆಪಿಜಿ: ಮಹದೇವಪ್ಪ ದಿದ್ದಿಗೆ