ಸಾರಾಂಶ
ಜಯುತಿ । ಡಾ.ವೀರಸೋಮೇಶ್ವರ ಜಗದ್ಗುರು ಅಭಿಮತ । ಜಗದ್ಗುರು ರೇಣುಕಾಚಾರ್ಯರ ಆರಾಧನೆ
ಕನ್ನಡಪ್ರಭ ವಾರ್ತೆ ಸಕಲೇಶಪುರಜನ್ಮ ಜನ್ಮಗಳ ಪುಣ್ಯದ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಜೀವನದ ಉನ್ನತಿಗೆ ಬದುಕಿನ ಶ್ರೇಯಸ್ಸಿಗೆ ಧರ್ಮಾಚರಣೆ ಮೂಲ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.
ತಾಲೂಕಿನ ಯಸಳೂರು ತೆಂಕಲಗೂಡು ಬೃಹನ್ಮಠದಲ್ಲಿ ಶುಕ್ರವಾರ ಜರುಗಿದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಸಮಾರಂಭದಲ್ಲಿ ಆಶೀರ್ವಚನ ನೀಡಿ, ‘ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಸುಖದಾಯಕ ಶಾಂತಿ ನೆಮ್ಮದಿಯ ಬದುಕಿಗೆ ಧರ್ಮ ಮತ್ತು ಧರ್ಮಾಚರಣೆ ಬಹಳ ಮುಖ್ಯ. ಅರಿವು ಆಚರಣೆಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಜೀವನ ಉಜ್ವಲಗೊಳ್ಳುವುದು. ಜಗದ್ಗುರು ರೇಣುಕಾಚಾರ್ಯರು ವಿಶ್ವ ಬಂಧುತ್ವದ ಸಾಮರಸ್ಯ, ಸೌಹಾರ್ದತೆಯ ಅಮೂಲ್ಯ ಬೋಧಾಮೃತವನ್ನು ಬೋಧಿಸಿದ್ದಾರೆ. ಅಹಿಂಸಾದಿ ಧ್ಯಾನ, ದಶ ಧರ್ಮ ಸೂತ್ರಗಳು ಸಕಲರ ಬಾಳಿನ ಉತ್ಕಷ್ಠತೆಗೆ ಕಾರಣವಾಗಿವೆ. ಮಾನವೀಯ ಆದರ್ಶ ಮೌಲ್ಯಗಳನ್ನು ವೀರಶೈವ ಧರ್ಮ ಎತ್ತಿ ಹಿಡಿದಿದೆ. ಜಾತಿ ಜನಾಂಗಗಳ ಗಡಿ ಮೀರಿ ಸರ್ವರ ಒಳಿತಿಗಾಗಿ ಸದಾ ಶ್ರಮಿಸಿದೆ. ವೀರಶೈವ ಧರ್ಮ ವೃಕ್ಷದ ಮೂಲ ಪರಮಾಚಾರ್ಯರಾದ ಜಗದ್ಗುರು ರೇಣುಕಾಚಾರ್ಯ ಜಯಂತಿ ಹಮ್ಮಿಕೊಂಡಿರುವುದು ತಮಗೆ ಸಂತಸ ತಂದಿದೆ’ ಎಂದು ಹೇಳಿದರು.ಯಡಿಯೂರು ಶ್ರೀಕ್ಷೇತ್ರದ ಶ್ರೀ ರೇಣುಕಾಶಿವಾಚಾರ್ಯ ಸ್ವಾಮಿಜಿ ಆಶೀರ್ವಚನ ನೀಡಿ, ‘ಇಂದು ವೀರಶೈವ ಸಮಾಜದ ಮೂಲ ಪುರುಷ ಜಗದ್ಗುರು ರೇಣಕಾಚಾರ್ಯರ ಜನ್ಮ ದಿನಾಚರಣೆಯನ್ನು ಎಲ್ಲ ಮಠಮಂದಿರಗಳಲ್ಲೂ ಆಚರಿಸುತ್ತಿರುವುದು ಸಂತಸದ ಬೆಳವಣಿಗೆ. ಮಠಮಂದಿರಗಳ ಉದ್ದಾರದಿಂದ ಸಮಾಜದಲ್ಲಿ ಸಂಸ್ಕಾರ, ಸಂಸ್ಕೃತಿ ವೃದ್ಧಿಸಲಿದೆ. ಇದರಿಂದ ಗ್ರಾಮಗಳು ಸಹ ಆರ್ಥಿಕವಾಗಿ ಸಮೃದ್ಧಿಗೊಳ್ಳಲಿವೆ. ಆದ್ದರಿಂದ, ಮಲೆನಾಡಿನ ಭಾಗದಲ್ಲಿರುವ ಮಠಗಳ ಅಭಿವೃದ್ದಿಗೆ ಭಕ್ತರು ಸಹಕರಿಸಬೇಕು ಎಂದರು.
ತೆಂಕಲಗೋಡು ಮಠದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಸಂಸ್ಕಾರ ಮುಖ್ಯ. ಜಗದ ಕತ್ತಲೆ ಕಳೆಯಲು ಸೂರ್ಯ, ಬದುಕಿನ ಕತ್ತಲೆ ಕಳೆಯಲು ಗುರು ಬೇಕು. ಲಿಂ. ಚನ್ನಮಲ್ಲಿಕಾರ್ಜುನ ಶ್ರೀ ಹಾಕಿದ ದಾರಿಯಲ್ಲಿ ಮುನ್ನಡೆದು ಶ್ರೀ ಮಠದ ಉನ್ನತಿಯನ್ನು ಮಾಡುತ್ತೇವೆ. ರಂಭಾಪುರಿ ಜಗದ್ಗುರು ಆಶೀರ್ವಾದ ಶ್ರೀರಕ್ಷೆ ಸದಾ ಇರಲಿ ಎಂದರು.ಅಖಿಲ ಬಾರತ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಬಿ.ಆರ್ ಗುರುದೇವ್ ಮಾತನಾಡಿ, ಮಲೆನಾಡಿನಲ್ಲಿ ಧಾರ್ಮಿಕ ಸಂಸ್ಕಾರ ಆರಂಭವಾಗಿದ್ದು ಜಗದ್ಗುರುಗಳ ಸಂಚಾರದಿಂದ. ಪಂಚಪೀಠದಿಂದ ಧರ್ಮ ಪ್ರಚಾರ ಸಾವಿರರಾರು ವರ್ಷದಿಂದ ನಡೆಯುತ್ತಿದೆ ಇದರಿಂದಾಗಿ ಇಂದು ನಾಡಿನಲ್ಲಿ ಧರ್ಮ ನೆಲಗೊಳ್ಳಲು ಕಾರಣವಾಗಿದೆ ಎಂದರು.
ಸಮಾರಂಭದ ಅಂಗವಾಗಿ ನೂತನ ಗುರು ನಿವಾಸ ಉದ್ಘಾಟನೆ, ಮೃತ್ಯುಂಜಯ ಹೋಮ, ಮಾಸ ಪತ್ರಿಕೆ ಬಿಡುಗಡೆ, ಪುಸ್ತಕ ಬಿಡುಗಡೆ ಹಾಗೂ ಜಂಗಮ ವಟುಗಳಿಗೆ ಶಿವದೀಕ್ಷಾ ಮೊದಲಾದವು ಜರುಗಿದವು.ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ರಂಭಾಪುರಿ ಶ್ರೀಗಳು ಸನ್ಮಾನಿಸಿದರು.
ಮುದ್ದಿನಕಟ್ಟೆಮಠದ ಅಭಿನವ ಸಿದ್ದಲಿಂಗ ಸ್ವಾಮೀಜಿ, ಚಂಗಡಿಹಳ್ಳಿಯ ಹೆಗ್ಗಡಹಳ್ಳಿ ಮಠದ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ. ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್ ಇದ್ದರು.ಸಕಲೇಶಪುರ ತಾಲೂಕಿನ ತೆಂಕಲಗೋಡು ಮಠದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ಬಾಳೆಹೊನ್ನೂರು ಪ್ರಸನ್ನ ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಉದ್ಘಾಟಿಸಿದರು.