ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ನಿರಂತರವಾಗಿ ಮಾಡಬೇಕು
ಕನ್ನಡಪ್ರಭ ವಾರ್ತೆ ಮೈಸೂರುಕೆಲಸದ ಜಾಗದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸಲು ಯೋಗ ಸಹಕಾರಿ ಎಂದು ಮೈಸೂರು ವಿವಿ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ. ಜ್ಯೋತಿ ತಿಳಿಸಿದರು.ಮೈಸೂರು ವಿವಿ ಮಾನಸ ಗಂಗೋತ್ರಿಯ ಮಾಳವೀಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರವು ಮಂಗಳವಾರದಿಂದ ಆಯೋಜಿಸಿರುವ ಯೋಗ ಮತ್ತು ಕ್ಷೇಮಪಾಲನೆ ಕುರಿತು ಯುಜಿಸಿ ಪ್ರಾಯೋಜಿತ ಒಂದು ವಾರದ ಅಲ್ಪಾವಧಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಭ್ಯಾಸ ನಿರಂತರವಾಗಿ ಮಾಡಬೇಕು. ವೃತ್ತಿಪರರು ಒತ್ತಡ ನಿರ್ವಹಣೆಗೆ ಹಲವು ರೀತಿಯಲ್ಲಿ ಯೋಗ ಸಹಾಯ ಮಾಡುತ್ತದೆ. ಯೋಗ ದೈಹಿಕವಾಗಿ ಮಾತ್ರವಲ್ಲದೆ, ಭಾವನಾತ್ಮಕ ಜ್ಞಾನ ಬೆಳೆಸುವ, ಸೃಜನಾತ್ಮಕ ತಿಳವಳಿಕೆ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅವರು ಹೇಳಿದರು.ಈ ಶಿಬಿರ ಉದ್ಘಾಟಿಸಿದ ಜಿಎಸ್‌ಎಸ್ ಯೋಗ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಹರಿ ದ್ವಾರಕನಾಥ್ ಮಾತನಾಡಿ, ಯೋಗ ಕೇವಲ ಧ್ಯಾನ, ಆಸನಗಳು ಮಾತ್ರವಲ್ಲ. ನಗುವುದು, ಹರ್ಷದಾಯಕವಾಗಿರುವುದು, ಗಮನವಿಟ್ಟು ಕೇಳಿಸಿಕೊಳ್ಳುವುದು ಕೂಡ ಯೋಗ. ಬೇರೊಬ್ಬರೊಂದಿಗೆ ನಾವು ಎಷ್ಟು ಆರಾಮಾದಾಯಕವಾಗಿ ಬದುಕುತ್ತೇವೆ ಎಂಬುದು ಕೂಡ ಒಂದು ಯೋಗ. ಒಬ್ಬರಿಂದ ಇನ್ನೊಬ್ಬರು ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವುದು ಕೂಡ ಯೋಗ ಎಂದು ತಿಳಿಸಿದರು.ನಮ್ಮ ಮೆದುಳಿನಲ್ಲಿ ಬುದ್ಧಿವಂತಿಕೆ ಮತ್ತು ಭಾವನಾತ್ಮಕ ಎಂಬ ಎರಡು ಭಾಗವಿದೆ. ಇವತ್ತು ಎಲ್ಲರೂ ಬುದ್ಧಿವಂತಿಕೆ ಇದೆ. ಆದರೆ ನಮ್ಮ ನೆರೆಯವರ ಬಗ್ಗೆ ಅರಿತುಕೊಂಡು ಅವರಿಗೆ ಸ್ಪಂದಿಸುವ ಕ್ಷೇಮಪಾಲನ ಮನೋಭಾವನೆ ಬೇಕಿದೆ. ನನ್ನ ಸುತ್ತಲಿನ ಜನ, ಸಂಬಂಧಗಳು ನನ್ನ ನಡವಳಿಕೆಯಿಂದ ನನ್ನೊಂದಿಗೆ ಎಷ್ಟು ಆರಾಮವಾಗಿದ್ದಾರೆ ಎಂಬುದು ಕ್ಷೇಮಪಾಲನೆ ಎಂದು ಅವರು ಹೇಳಿದರು.ಶಿಬಿರದ ಸಂಯೋಜಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಎಲ್. ನಂಜುಂಡಸ್ವಾಮಿ ಸ್ವಾಗತಿಸಿದರು.