ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ದೂರ: ನ್ಯಾಯಾಧೀಶೆ ಪ್ರಮೀಳಾ

| Published : May 02 2024, 12:21 AM IST

ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ದೂರ: ನ್ಯಾಯಾಧೀಶೆ ಪ್ರಮೀಳಾ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗ ವ್ಯಕ್ತಿಯ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದೇಶದಲ್ಲಿ ಯೋಗಕ್ಕೆ ಸಾಕಷ್ಟು ಮನ್ನಣೆ ದೊರೆಯುತ್ತಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಪ್ರಮೀಳಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಯೋಗ ವ್ಯಕ್ತಿಯ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದೇಶದಲ್ಲಿ ಯೋಗಕ್ಕೆ ಸಾಕಷ್ಟು ಮನ್ನಣೆ ದೊರೆಯುತ್ತಿದೆ ಎಂದು ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಪ್ರಮೀಳಾ ತಿಳಿಸಿದರು.ಇಲ್ಲಿನ ಯೋಗ ಮಂದಿರದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಹೇಮಾವತಿ ವಲಯ ಮಧುಗಿರಿ ಶಾಖೆಯಿಂದ ಕಳೆದ 21 ದಿನಗಳಿಂದ ನಡೆದ ಮಕ್ಕಳ ವಸಂತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವ್ಯಕ್ತಿ ನಿರಂತರವಾಗಿ ಯೋಗಾಭ್ಯಾಸ ಮಾಡುವುದರಿಂದ ಎಂತಹ ಮಾನಸಿಕ ಒತ್ತಡವಿದ್ದರೂ ದೂರವಾಗುತ್ತದೆ. ಇತಿಹಾಸದಲ್ಲಿನ ಮಹನೀಯರ ಜೀವನದ ವಿವರಗಳನ್ನು ಓದುವ ಮೂಲಕ ಯುವಕರು ತಮ್ಮ ಬದುಕು ಕಟ್ಟಿಕೊಳ್ಳಬೇಕು ಎಂದರು.

ಇಂದಿನ ಯುವ ಜನಾಂಗ ಮೊಬೈಲ್‌ಗಳಿಂದ ತಪ್ಪು ಹೆಜ್ಜೆ ಇಡುವಂತಾಗಿದೆ ಎಂಬ ಆರೋಪ ಸರಿಯಲ್ಲ. ಅದನ್ನು ಜ್ಞಾನ ಸಂಪಾದನೆಗಾಗಿ ಸದ್ಬಳಕೆ ಮಾಡಿಕೊಳ್ಳುವುದರಿಂದ ದೇಶದ ಹೊಸ ವಿದ್ಯಾಮಾನಗಳನ್ನು ಅರಿಯಬಹುದು. ಮಕ್ಕಳು ಹಿರಿಯರ ಮಾರ್ಗದರ್ಶನ ಪಡೆಯುವುದರಿಂದ ಬದುಕಿಗೆ ಬೇಕಾದ ಸತ್ಯದ ಹಾದಿ ಕಂಡುಕೊಳ್ಳಬಹುದು ಎಂದು ಹೇಳಿದರು.

ಹೆತ್ತವರ, ಗುರು ಹಿರಿಯ ಸಲಹೆ, ಸೂಚನೆ ಪ್ರಮಾಣಿಕವಾಗಿ ಪಾಲಿಸಬೇಕು. ಆ ನಿಟ್ಟಿನಲ್ಲಿ ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ರಕ್ಷಣೆಗೆ ನಿಲ್ಲದೆ ಅವರಿಗೆ ತಪ್ಪನ್ನು ತಿದ್ದಿ ಅರಿವು ಮೂಡಿಸಬೇಕು. ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಪೋಷಕರ ಮೇಲಿದೆ. ಇಂತಹ ಶಿಬಿರಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಚಿತ್ರಕಲೆ, ಯೋಗ, ಹಲವು ಪಠ್ಯಕ್ಕೆ ಸಂಬಂಧಿಸಿದ ಮಾಹಿತಿಗಳು, ಆಟಗಳು ಆಡಿಸಿದ್ದನ್ನು ಕೇಳಿದ್ದೇನೆ. ಇಲ್ಲಿಂದ ಕಲಿತ ಸಂಸ್ಕಾರವನ್ನು ನಿಮ್ಮ ಜೀವಿತಾವಧಿಯಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಉತ್ತಮ ನಾಗರಿಕರಾಗಿ ಎಂದು ಕರೆ ನೀಡಿದರು.

ಶಿಶುನಾಳ ಷರೀಫ್‌ರ ತತ್ವ ಪ್ರಚಾರಕ ಎಂ.ಸಿ.ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಫೇಸ್‌ಬುಕ್‌ ಮತ್ತು ವಾಟ್ಸಪ್‌ಗಳಿಗೆ ಬದಲಾಗಿ ಪ್ರಾಣಿ ಪಕ್ಷಿಗಳೊಡನೆ ಮಾತನಾಡುವ ಕಲೆ ರೂಡಿಸಿಕೊಳ್ಳಬೇಕು. ರಾಮಾಯಣ ಮತ್ತು ಮಹಾಭಾರತಗಳಂತಹ ಮಹಾಕಾವ್ಯಗಳನ್ನು ಓದಿ, ತಂದೆ-ತಾಯಂದಿರು ಮತ್ತು ಹಿರಿಯರೊಡನೆ ಅವರ ಅನುಭವಗಳನ್ನು ತಿಳಿಯಲು ಯತ್ನಿಸಬೇಕು ಎಂದರು.

ಹಿರಿಯ ವಕೀಲ ಜಿ.ಬಿ.ಹಾಲಪ್ಪ, ಸಂಚಾಲಕ ನರಸಿಂಹಮೂರ್ತಿ, ಯೋಗ ಶಿಕ್ಷಕರು ಇದ್ದರು.