ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಪ್ರಸಿದ್ಧ ಕ್ರಿಯಾಶೀಲ ರಂಗತಂಡ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ವರ್ಷಂಪ್ರತಿ ಕೊಡಮಾಡುವ ರಂಗಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪ್ರತಿಭಾನ್ವಿತ ರಂಗನಟ ನವೀನ್ ಡಿ ಪಡೀಲ್ ಅವರಿಗೆ ಘೋಷಿಸಲಾಗಿದೆ.ಮೇ 3 ರಂದು ಸಂಜೆ 5.30ಕ್ಕೆ ನಗರದ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕೆ.ಗೋಪಾಲಕೃಷ್ಣ ಶೆಟ್ಟಿ ಬುಧವಾರ ಸುದ್ಸಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಗರಿ ಎಂಟರ್‌ಪ್ರೈಸಸ್‌ನ ಅಗರಿ ರಾಘವೇಂದ್ರ ರಾವ್, ರಂಗಸಂಗಾತಿ ಕಲಾಪೋಷಕ ಉಡುಪಿ ವಿಶ್ವನಾಥ ಶೆಣೈ, ಕೆನರಾ ವಿದ್ಯಾ ಸಂಸ್ಥೆಯ ರಂಗನಾಥ ಭಟ್, ಪ್ರಸಿದ್ಧ ರಂಗ ನಿರ್ದೇಶಕ ಡಾ.ಜೀವನ್ ರಾಮ್ ಸುಳ್ಯ, ರೊಟೇರಿಯನ್ ವಿಕ್ರಮ್ ದತ್ತ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ದಯಾನಂದ ರಾವ್ ಕಾವೂರು ಆಗಮಿಸಲಿದ್ದಾರೆ ಎಂದರು.ಉಡುಪಿ ವಿಶ್ವನಾಥ ಶೆಣೈ ಪ್ರಾಯೋಜಿತ, ರಂಗಕರ್ಮಿ ದಿವಂಗತ ಭಾಸ್ಕರ ನೆಲ್ಲಿತೀರ್ಥ ನೆನಪಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಚಲನಚಿತ್ರ, ಕಿರುತೆರೆ ಮತ್ತು ತುಳು, ಕನ್ನಡ ರಂಗಭೂಮಿಯಲ್ಲಿ ಕಳೆದ 35 ವರ್ಷಗಳಿಂದ ತೊಡಗಿಕೊಂಡು ಅಪರೂಪ ಸಾಧನೆ ಮಾಡಿದ ಕುಸಲ್ದರಸೆ ನವೀನ್ ಡಿ ಪಡೀಲ್ ಅವರನ್ನು ಡಾ.ನಾ.ದಾಮೋದರ ಶೆಟ್ಟಿ, ಡಾ.ಮೀನಾಕ್ಷಿ ರಾಮಚಂದ್ರ ಮತ್ತು ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್‌ರವರನ್ನು ಒಳಗೊಂಡ ಸಮಿತಿ ಆಯ್ಕೆ ಮಾಡಿದೆ. ಪ್ರಶಸ್ತಿಯು ಸ್ಮರಣಿಕೆ, ನಗದು, ಸನ್ಮಾನ ಪತ್ರವನ್ನು ಒಳಗೊಂಡಿದೆ ಎಂದರು. ಇದೇ ಸಂದರ್ಭ ಶ್ರೀ ಶಾರದಾ ಸೇವಾ ಸಮಿತಿ ಸಹಯೋಗದಲ್ಲಿ ನಡೆಯುವ ದಿ.ಪಣಂಬೂರು ಜನಾರ್ದನ ರಾವ್ ಸ್ಮರಣಾರ್ಥ ನೀಡಲಾಗುವ ವಾರ್ಷಿಕ ರಂಗ ಪ್ರಶಸ್ತಿಯನ್ನು ಈ ಬಾರಿ ಹಿರಿಯ ನಟಿ, ಬಹುಮುಖ ಪ್ರತಿಭೆ ಸಾವಿತ್ರಿ ಶ್ರೀನಿವಾಸ ರಾವ್ ರವರಿಗೆ ಕೊಡಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.ಬಳಿಕ ರಂಗಸಂಗಾತಿ ಬಳಗದಿಂದ ‘ನೆಮ್ಮದಿ ಅಪಾರ್ಟೆಂಟ್ ಬ್ಲಾಕ್ ಬಿ’ ಎಂಬ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. ಇದು ಜನಮನ ಗೆದ್ದ ನೆಮ್ಮದಿ ಅಪಾರ್ಟೆಂಟ್ ಫ್ಲಾಟ್ ನಂಬರ್ 252 ನಾಟಕದ ಮುಂದುವರಿದ ಭಾಗವಾಗಿದೆ ಎಂದರು.ಈ ನಾಟಕದ ರಚನೆ ಶಶಿರಾಜ್ ಕಾವೂರು, ವಿನ್ಯಾಸ ಮತ್ತು ನಿರ್ದೇಶನ ಮೋಹನಚಂದ್ರ ಯು. ಸಂಗೀತ ಮೈಮ್ ರಾಮದಾಸ್, ಸಂಗೀತ ನಿರ್ವಹಣೆ ಸಂದೀಪ್ ಮಧ್ಯ, ಬೆಳಕು ಕ್ರಿಸ್ಟಿ. ರಂಗದಲ್ಲಿ ಲಕ್ಷ್ಮಣ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಮುರಳೀಧರ ಕಾಮತ್, ಮೈಮ್ ರಾಮದಾಸ್, ಹರಿಪ್ರಸಾದ್ ಕುಂಪಲ, ಮಂಜುಳ ಜನಾರ್ದನ, ಮಧುರ ಆರ್.ಜಿ., ರಂಜನ್ ಬೋಳೂರು, ಗುಂಡು ಮಾಮ ಖ್ಯಾತಿಯ ನವೀನ್ ಡಿ ಪಡೀಲ್ ಮತ್ತು ಪ್ರಸಿದ್ಧ ಕಿರುತೆರೆ ನಟ ಶೋಭರಾಜ್ ಪಾವೂರು ಮತ್ತಿತರರು ಅಭಿನಯಿಸಲಿದ್ದಾರೆ ಎಂದರು. ರಂಗಸಂಗಾತಿ ಸದಸ್ಯರಾದ ಸುರೇಶ್ ಬೆಳ್ಳಡ ಕೊಳಂಬೆ, ಚಂದ್ರಶೇಖರ ಕೂಳೂರು, ರಂಜನ್ ಬೋಳೂರು ಇದ್ದರು.
--------------