ಹಣ, ಉಡುಗೊರೆ ಹಂಚಿಕೆ ತಡೆಗೆ ನಿಗಾ ವಹಿಸಿ: ಬಿ. ಮುರಳಿಕುಮಾರ್

| Published : May 02 2024, 12:21 AM IST

ಹಣ, ಉಡುಗೊರೆ ಹಂಚಿಕೆ ತಡೆಗೆ ನಿಗಾ ವಹಿಸಿ: ಬಿ. ಮುರಳಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ತಡೆಗೆ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚರಿಸಬೇಕು ಎಂದು ಜಿಲ್ಲೆಗೆ ವಿಶೇಷ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಬಿ. ಮುರಳಿಕುಮಾರ್ ಸೂಚಿಸಿದರು.

ಕಾರವಾರ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 7ರಂದು ಮತದಾನ ನಡೆಯಲಿರುವ ಹಿನ್ನೆಲೆ ಮತದಾರರಿಗೆ ಹಣ, ಉಡುಗೊರೆ ಮತ್ತಿತರ ಆಮಿಷಗಳನ್ನು ಒಡ್ಡುವುದರ ಕುರಿತಂತೆ ನಿಗಾ ವಹಿಸಬೇಕು. ಈ ಕುರಿತಂತೆ ದೂರುಗಳು ಬಂದ ತಕ್ಷಣವೇ ಸ್ಥಳಕ್ಕೆ ತೆರಳಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲೆಗೆ ವಿಶೇಷ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಬಿ. ಮುರಳಿಕುಮಾರ್ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯಲು ಅಡ್ಡಿಪಡಿಸಲು ಮತದಾರರಿಗೆ ಹಣ, ಉಡುಗೊರೆಗಳನ್ನು ನೀಡುವ ಮೂಲಕ ಅವರಿಗೆ ಆಮಿಷ ನೀಡುವ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಕುರಿತಂತೆ ಹೆಚ್ಚಿನ ನಿಗಾ ವಹಿಸಬೇಕು. ಅಕ್ರಮ ತಡೆಗೆ ನಿಯೋಜಿಸಿರುವ ಫ್ಲೈಯಿಂಗ್ ಸ್ಕ್ವಾಡ್‌ನ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಿರಂತರವಾಗಿ ಸಂಚರಿಸಬೇಕು ಎಂದರು.

ಜಿಲ್ಲೆಯಲ್ಲಿನ ಬ್ಯಾಂಕ್‌ಗಳು ಮತ್ತು ಸಹಕಾರಿ ಸಂಘಗಳಲ್ಲಿನ ದೈನಂದಿನ ವ್ಯವಹಾರಗಳ ಮೇಲೆ ಪ್ರತಿದಿನ ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿರಬೇಕು. ಸಂಶಯಾಸ್ಪದ ಹಣ ವರ್ಗಾವಣೆ ಮತ್ತಿತರರ ನಗದು ವಹಿವಾಟುಗಳು ಕಂಡುಬಂದಲ್ಲಿ ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಮತ್ತು ಸಂಬಂಧಿತ ಇಲಾಖೆಗಳಿಗೆ ತಕ್ಷಣ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣಾ ಕಾರ್ಯವನ್ನು ಇನ್ನಷ್ಟು ಬಿಗಿಗೊಳಿಸಬೇಕು. ಮತದಾನ ಹತ್ತಿರವಾದಂತೆ ಜಿಲ್ಲೆಯ ಗಡಿಭಾಗದಿಂದ ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಪೂರಕವಾಗುವ ವಸ್ತುಗಳ ಪೂರೈಕೆ ಆಗುವ ಸಾಧ್ಯತೆ ಇದ್ದು, ಯಾವುದೇ ಕಾರಣಕ್ಕೂ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಅಲ್ಲದೇ ಇದೇ ಅವಧಿಯಲ್ಲಿ ಲೋಕಸಭಾ ಕ್ಷೇತ್ರದ ಒಳಗೆ ಸಹ ಚುನಾವಣಾ ಅಕ್ರಮ ಚಟುವಟಿಕೆಗಳು ನಡೆಯದಂತೆ ತೀವ್ರ ಎಚ್ಚರವಹಿಸಬೇಕು.

ಚುನಾವಣಾ ಅಕ್ರಮಗಳ ಕುರಿತು ಸಿವಿಜಿಲ್ ಮೂಲಕ ಸಲ್ಲಿಕೆಯಾಗುವ ದೂರುಗಳನ್ನು ನಿಗದಿತ ಅವಧಿಯೊಳಗೆ ಇತ್ಯರ್ಥಪಡಿಸಬೇಕು. ದೂರು ನೀಡುವ ಸಾರ್ವಜನಿಕರನ್ನು ಸಂಪರ್ಕಿಸಿ ದೂರಿನ ಕುರಿತಂತೆ ಸಮಗ್ರ ಮಾಹಿತಿ ಪಡೆಯುವದರ ಜತೆಗೆ ದೂರು ಪರಿಶೀಲನೆಗೆ ತಾವು ಆಗಮಿಸುತ್ತಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿ. ಇದರಿಂದ ಸಾರ್ವಜನಿಕರಿಗೆ ಜಿಲ್ಲಾಡಳಿತ ಅವರ ದೂರಿಗೆ ತಕ್ಷಣದಲ್ಲಿ ಸ್ಪಂದಿಸುತ್ತಿದೆ ಎಂಬ ಭಾವನೆ ಮೂಡಿ, ಅಕ್ರಮಗಳ ಕುರಿತಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿ, ಮತಗಟ್ಟೆಗೆ ಆಗಮಿಸುವ ಮತದಾರರಿಗೆ ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಫ್ಯಾನ್ ವ್ಯವಸ್ಥೆ, ಶೌಚಾಲಯ, ವಿಶ್ರಾಂತಿ ಕೊಠಡಿ, ಅಂಗವಿಕಲರಿಗೆ ವೀಲ್‌ಚೇರ್ ಮತ್ತು ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದರು.ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ಜಿಲ್ಲೆಯಲ್ಲಿ ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಮತ್ತು ಸುಗಮ ಹಾಗೂ ಶಾಂತಿಯುತ ಚುನಾವಣೆಗಾಗಿ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಹಾಗೂ ಚುನಾವಣಾ ಅಕ್ರಮ ತಡೆ ಕುರಿತಂತೆ ಕೈಗೊಂಡಿರುವ ಕ್ರಮಗಳು ಮತ್ತು ವಶಪಡಿಸಿಕೊಂಡಿರುವ ವಸ್ತುಗಳು ಹಾಗೂ ದಾಖಲಿಸಿರುವ ಪ್ರಕರಣಗಳ ಕುರಿತು ವಿವರಿಸಿದರು.

ಜಿಲ್ಲೆಯ ಚುನಾವಣಾ ವೀಕ್ಷಕ ರಾಜೀವ ರತನ್, ವೆಚ್ಚ ವೀಕ್ಷಕ ಪ್ರಶಾಂತ್ ಸಿಂಗ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಎಸಿಗಳಾದ ಕನಿಷ್ಕ, ಕಲ್ಯಾಣಿ ಕಾಂಬ್ಳೆ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ವಿವಿಧ ನೋಡಲ್ ಅಧಿಕಾರಿಗಳು ಇದ್ದರು.