ಸಾರಾಂಶ
ಹುಬ್ಬಳ್ಳಿ:
ಭವಿಷ್ಯದ ಭಾರತವನ್ನು ಮುನ್ನಡೆಸುವ ಶಕ್ತಿ ಯುವಕರಲ್ಲಿದೆ. ಅದನ್ನು ಉತ್ತಮವಾಗಿ ಬಳಸಿಕೊಳ್ಳುವುದರೊಂದಿಗೆ ನಿಮ್ಮ ಏಳ್ಗೆಗೆ ಶ್ರಮಿಸಿದ ಪಾಲಕರು, ಗುರುಗಳು ಹಾಗೂ ದೇಶದ ಕೀರ್ತಿ ಹೆಚ್ಚಿಸುವಲ್ಲಿ ಕೈಜೋಡಿಸಿ ಎಂದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ. ಅಭಯ ಕರಂದಿಕರ ಕರೆ ನೀಡಿದರು.ಅವರು ಇಲ್ಲಿನ ವಿದ್ಯಾನಗರದಲ್ಲಿರುವ ಬಿವಿಬಿ ಆವರಣದ ಡಾ. ಪ್ರಭಾಕರ ಕೋರೆ ಸ್ಪೋರ್ಟ್ಸ್ ಅರೇನಾದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಸಂಭ್ರಮಿಸುವ ಉತ್ಸವ:ಇದೇ ತಾಂತ್ರಿಕ ವಿವಿಯಲ್ಲಿ ಕಲಿತು ಹೊರಬಂದ ಸಾವಿರಾರು ಯುವಕರು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕರು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಈ ಘಟಿಕೋತ್ಸವ ಎಂಬುದು ಕೇವಲ ಪದವಿ ಪ್ರದಾನ ಮಾಡುವ ಸಂಪ್ರದಾಯವಲ್ಲ, ವಿದ್ಯಾರ್ಥಿಗಳು ತಾವು ಕಂಡ ಕನಸು ಸಾಕಾರಗೊಳಿಸಿಕೊಂಡ ಗಳಿಗೆಯನ್ನು ಸಂಭ್ರಮಿಸುವ ಮಹಾ ಉತ್ಸವವಾಗಿದೆ ಎಂದರು.
ಹಲವು ಅವಕಾಶ:ತಂತ್ರಜ್ಞಾನದೊಂದಿಗೆ ನಡೆಯುತ್ತಿರುವ ಇಂದಿನ ಜಗತ್ತಿನಲ್ಲಿ ನೀವು ಗಳಿಸಿರುವ ತಾಂತ್ರಿಕ ಜ್ಞಾನ, ಕೌಶಲ ಬಹುಮುಖ್ಯವಾಗಿ ಆತ್ಮವಿಶ್ವಾಸಗಳೊಂದಿಗೆ ಭವಿಷ್ಯದ ದಿನಗಳಿಗೆ ಕಾಲಿಡಬೇಕು. ಜಗತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾಗುತ್ತಿದೆ. ಇಲ್ಲಿ ಸಂಶೋಧನೆ ಮುಖ್ಯ ಪಾತ್ರ ವಹಿಸುತ್ತಿದೆ. ಉದ್ಯಮಶೀಲತೆ, ತಾಂತ್ರಿಕ ಅಭಿವೃದ್ಧಿ, ಸಂಶೋಧನೆಯಲ್ಲಿ ಯುವಭಾರತಕ್ಕೆ ಬಹಳಷ್ಟು ಅವಕಾಶಗಳಿವೆ ಎಂದರು.
ಏಳ್ಗೆಗೆ ಕೈಜೋಡಿಸಿ:ಔದ್ಯೋಗಿಕ ಕ್ಷೇತ್ರದಲ್ಲಿ ವಿಜ್ಞಾನ ತಂತ್ರಜ್ಞಾನವು ಹಲವು ಅವಕಾಶಗಳನ್ನು ಸೃಷ್ಟಿಸುತ್ತಿದೆ. ಇದು ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಬದಲಾವಣೆಗೆ ಕಾರಣವಾಗಲಿದೆ. ಕೇಂದ್ರ ಸರ್ಕಾರ ಕೂಡ ವಿಕಸಿತ ಭಾರತ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದು, ಶಿಕ್ಷಣ, ಸಂಶೋಧನೆಗೆ ಆದ್ಯತೆ ನೀಡುತ್ತಿದೆ. ಹಾಗಾಗಿ ಲಭ್ಯ ಅವಕಾಶಗಳನ್ನು ಬಳಸಿಕೊಂಡು ದೇಶದ ಏಳಿಗೆಗೆ ಕೈಜೋಡಿಸುವಂತೆ ಕರೆ ನೀಡಿದರು.
5 ಎಕರೆ ಜಾಗ ದೇಣಿಗೆ:ಗೌರವ ಡಾಕ್ಟರೆಟ್ ಸ್ವೀಕರಿಸಿದ ಮಾಜಿ ಸಚಿವ, ನಿರಾಣಿ ಗ್ರೂಪ್ ಅಧ್ಯಕ್ಷ ಮುರುಗೇಶ ನಿರಾಣಿ ಮಾತನಾಡಿ, ಸಪ್ತಷಿರ್ಗಳಿಂದ ಆರಂಭವಾಗಿರುವ ಈ ಕೆಎಲ್ಇ ಸಂಸ್ಥೆಯು ಇದೀಗ ಡಾ. ಪ್ರಭಾಕರ ಕೋರೆ ಸಾರಥ್ಯದಲ್ಲಿ ಹಲವು ಮಜಲುಗಳನ್ನು ತಲುಪಿದೆ. ಎಲ್ಲ ರಂಗಗಳಲ್ಲಿ ಸಾಧನೆ ಮಾಡಿದೆ. ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಕೋರೆ ಅವರ ಅವಧಿಯಲ್ಲಿ ಬರಬೇಕು. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ 5 ಎಕರೆ ಜಮೀನು ನೀಡಲು ತಾವು ಸಿದ್ಧರಿದ್ದು, ಅಲ್ಲಿಯೂ ಒಂದು ಶಿಕ್ಷಣ ಸಂಸ್ಥೆ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ಆತ್ಮನಿರ್ಭರ ಭಾರತ ಸಾಕಾರವಾಗಬೇಕು. ಇಂಧನ ಉತ್ಪಾದನೆ ಹೆಚ್ಚಿಸಬೇಕಿದೆ. ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕೇವಲ ನೌಕರಿಗಾಗಿ ಹುಡುಕಾಡದೇ ಸ್ವಂತ ಉದ್ಯಮ ಆರಂಭಿಸಬೇಕು. ಮತ್ತಷ್ಟು ಜನರಿಗೆ ಉದ್ಯೋಗ ನೀಡುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕುಲಪತಿ ಪ್ರೊ. ಪ್ರಕಾಶ ತೆವರಿ ವಾರ್ಷಿಕ ವರದಿ ವಾಚಿಸಿದರು. ಇದೇ ವೇಳೆ ಚಿನ್ನ ಹಾಗೂ ಬೆಳ್ಳಿ ಪದಕ ಮತ್ತು ಪಿಎಚ್.ಡಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಸಮ ಕುಲಾಧಿಪತಿ ಡಾ. ಅಶೋಕ ಶೆಟ್ಟರ್ ಪರಿಚಯಿಸಿದರು. ಕೆಎಲ್ಇ ಕುಲಾಧಿಪತಿ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿದ್ದರು.
ಪರೀಕ್ಷಾಂಗ ವಿಭಾಗದ ಡಾ. ಅನಿಲಕುಮಾರ ನಂದಿ, ಡೀನ್ ಡಾ. ಎನ್.ಎಚ್. ಅಯಾಚಿತ್, ಕುಲಸಚಿವ ಡಾ. ಬಸವರಾಜ ಅನಾಮಿ, ವಿವಿಧ ವಿಭಾಗಗಳ ಮುಖ್ಯಸ್ಥರು ಭಾಗವಹಿಸಿದ್ದರು.1,677 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಘಟಿಕೋತ್ಸವದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೆಟ್ ಪದವಿ ಸೇರಿ ಒಟ್ಟು 1,677 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 850 ವಿದ್ಯಾರ್ಥಿಗಳು, 517 ವಿದ್ಯಾರ್ಥಿನಿಯರು ಸೇರಿ 1,367 ವಿದ್ಯಾರ್ಥಿಗಳಿಗೆ ಪದವಿ, 138 ವಿದ್ಯಾರ್ಥಿಗಳು, 155 ವಿದ್ಯಾರ್ಥಿನಿಯರು ಸೇರಿ ಒಟ್ಟು 293 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ, 14 ವಿದ್ಯಾರ್ಥಿಗಳು, 3 ವಿದ್ಯಾರ್ಥಿನಿಯರು ಸೇರಿ 17 ವಿದ್ಯಾರ್ಥಿಗಳಿಗೆ ಡಾಕ್ಟರೆಟ್ ಪದವಿ ನೀಡಿ ಗೌರವಿಸಲಾಯಿತು. 12 ಪದವಿ, 6 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಒಟ್ಟು 18 ಚಿನ್ನದ ಪದಕ ವಿತರಿಸಲಾಯಿತು. ಇದರಲ್ಲಿ 8 ವಿದ್ಯಾರ್ಥಿಗಳು, 10 ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆದು ಸಂಭ್ರಮಿಸಿದರು. 13 ಪದವಿ, 6 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿ ಒಟ್ಟು 19 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಲಾಯಿತು. ಸಿವಿಲ್ ವಿಭಾಗದಲ್ಲಿ ಟಾಪರ್ ಆದ ಬಯೋಟೆಕ್ ವಿದ್ಯಾರ್ಥಿನಿ ಮುಸ್ಕಾನ ಮಧುಕೇಶ್ವರ ನಾಯಕ್ ಅವರಿಗೆ ಡಾ. ಎಸ್.ಎಸ್. ಭಾವಿಕಟ್ಟಿ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಉದ್ಯಮಿ ಹಾಗೂ ರಾಜಕಾರಣಿ, ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.