ಸ್ವಂತ ಸೂರು ಹೊಂದುವ ಕನಸು ಕಂಡಿದ್ದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರ ಸೂರು ಸಿದ್ಧ

| Published : Nov 17 2024, 01:19 AM IST / Updated: Nov 17 2024, 07:53 AM IST

ಸ್ವಂತ ಸೂರು ಹೊಂದುವ ಕನಸು ಕಂಡಿದ್ದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರ ಸೂರು ಸಿದ್ಧ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಂತ ಸೂರು ಹೊಂದುವ ಕನಸು ಕಂಡಿದ್ದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗಾಗಿ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ‘1 ಬಿಎಚ್‌ಕೆ’ ಫ್ಲ್ಯಾಟ್‌ಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ 

 ಬೆಂಗಳೂರು : ಸ್ವಂತ ಸೂರು ಹೊಂದುವ ಕನಸು ಕಂಡಿದ್ದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತರಿಗಾಗಿ ‘ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಿಸಿರುವ ‘1 ಬಿಎಚ್‌ಕೆ’ ಫ್ಲ್ಯಾಟ್‌ಗಳ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಕಳೆದ ಕೆಲವು ದಿನಗಳಲ್ಲಿ 304 ಫ್ಲ್ಯಾಟ್‌ಗಳನ್ನು ನೋಂದಣಿ ಮಾಡಲಾಗಿದೆ.

ಬೆಂಗಳೂರು ನಗರ ಮತ್ತು ಜಿಲ್ಲೆ ವ್ಯಾಪ್ತಿಯ ಸಾದೇನಹಳ್ಳಿ, ಅಗ್ರಹಾರ ಪಾಳ್ಯ, ಪಿಳ್ಳಹಳ್ಳಿ, ಕೂಗೂರು, ಚಿಕ್ಕೆಲ್ಲೂರು ರಾಮಪುರ, ದೇವಗೆರೆ, ಗೂಳಿಮಂಗಲ, ಜೆ.ಭಿಂಗಿಪುರ, ಕುಕ್ಕನಹಳ್ಳಿ ಮತ್ತು ದೇವೆಗೆರೆಯಲ್ಲಿ 3,407 ಫ್ಲ್ಯಾಟ್‌ಗಳು ಸಿದ್ಧಗೊಂಡಿವೆ. ಯೋಜನಾ ಸ್ಥಳಕ್ಕೆ ಭೇಟಿ ನೀಡಿ ತಮಗೆ ಇಷ್ಟದ ಫ್ಲ್ಯಾಟ್‌ಗಳನ್ನು ಆಯ್ಕೆ ಮಾಡಿಕೊಂಡು 2,572 ಜನ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಪೂರ್ಣ ಹಣ ಪಾವತಿ ಮಾಡಿದವರ ಹೆಸರಿಗೆ ಫ್ಲ್ಯಾಟ್‌ ನೋಂದಣಿ ಮಾಡಲಾಗುತ್ತಿದೆ. ಕೆಲವರು ಈಗಾಗಲೇ ಗೃಹ ಪ್ರವೇಶ ಮಾಡಿದ್ದಾರೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.

4 ಮಹಡಿ ಮತ್ತು ಮೇಲ್ಪಟ್ಟು ಕಟ್ಟಡಗಳಲ್ಲಿ ಲಿಫ್ಟ್ ಅಳವಡಿಸಲಾಗಿದೆ. ನೀರು, ವಿದ್ಯುತ್, ರಸ್ತೆ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗಿದೆ. ಅರ್ಜಿ ಸಲ್ಲಿಸಿ ಪೂರ್ತಿ ಶುಲ್ಕ ಪಾವತಿಸಿರುವ ಎಲ್ಲರಿಗೂ ತ್ವರಿತಗತಿಯಲ್ಲಿ ನೋಂದಣಿ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದರು.

ನಿವಾಸಿಗಳ ಸ್ಥಿತಿ-ಗತಿಯ ಅಧ್ಯಯನ: ಫ್ಲ್ಯಾಟ್‌ಗಳಲ್ಲಿ ನೆಲೆಸುವ ನಿವಾಸಿಗಳ ಆರ್ಥಿಕ, ಸಾಮಾಜಿಕ ಸ್ಥಿತಿ-ಗತಿ ಬದಲಾವಣೆ ಆಗಿರುವ ಕುರಿತು ಒಂದು ವರ್ಷ ಬಳಿಕ ಅಧ್ಯಯನ ನಡೆಸಲಾಗುತ್ತದೆ. ಫ್ಲ್ಯಾಟ್‌ ಪಡೆಯುವ ಪೂರ್ವದಲ್ಲಿ ಮತ್ತು ನಂತರದಲ್ಲಿನ ಸ್ಥಿತಿ-ಗತಿಯನ್ನು ವಸತಿ ಯೋಜನೆಯ ಭಾಗವಾಗಿಯೇ ಅಧ್ಯಯನ ನಡೆಸಲಾಗುತ್ತದೆ.

2016-17ರಲ್ಲಿ ಯೋಜನೆ ಘೋಷಣೆಯಾಗಿತ್ತು. 2020-21ರಲ್ಲಿ ನಿರ್ಮಾಣ ಕಾರ್ಯ ಆರಂಭವಾಯಿತು. 2023ರಲ್ಲೇ ಅನೇಕ ಕಡೆ ಫ್ಲ್ಯಾಟ್‌ಗಳ ಸಿದ್ಧವಾಗಿದ್ದರೂ, ವಿವಿಧ ಕಾರಣಗಳಿಂದ ಹಂಚಿಕೆ ಆಗಿರಲಿಲ್ಲ. ಅಂತಿಮವಾಗಿ 2024ರ ನವೆಂಬರ್‌ನಲ್ಲಿ ಹಸ್ತಾಂತರ ಮಾಡಲಾಗುತ್ತಿದೆ.

ಸೋಲಾರ್ ವಿದ್ಯುತ್: ಅಪಾರ್ಟ್‌ಮೆಂಟ್ ಸಮುಚ್ಛಯ ಇರುವ ಕಟ್ಟಡ ಮತ್ತು ಆವರಣದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಆವರಣ ಮತ್ತು ಕಾರಿಡಾರ್‌ನ ದೀಪಗಳು ಸೋಲಾರ್ ವಿದ್ಯುತ್‌ನಿಂದಲೇ ಬೆಳಗುತ್ತವೆ.

ರಚನೆ ಕುರಿತು ಐಐಎಸ್ಸಿ ವರದಿ: ಬಹುಮಹಡಿ ಕಟ್ಟಡಗಳ ರಚನೆ, ವಿನ್ಯಾಸ ಸೇರಿದಂತೆ ನಿರ್ಮಾಣ ಸಂಬಂಧಿಸಿದ ಗುಣಮಟ್ಟ ಕಾಪಾಡಿಕೊಳ್ಳಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮುಂಬೈನಿಂದ ಅಧ್ಯಯನ ವರದಿಯನ್ನು ತರಿಸಿಕೊಂಡು ಗುಣಮಟ್ಟ ಖಾತ್ರಿಪಡಿಸಲಾಗಿದೆ.

ಫ್ಲ್ಯಾಟ್‌ಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: ಯಲಹಂಕ, ಆನೇಕಲ್, ಯಶವಂತಪುರ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 10 ಕಡೆ ಇನ್ನು 800ಕ್ಕೂ ಹೆಚ್ಚು ಫ್ಲ್ಯಾಟ್‌ಗಳು ಕೂಡಲೇ ಗೃಹ ಪ್ರವೇಶಕ್ಕೆ ಲಭ್ಯ ಇವೆ. ಸ್ಥಳಕ್ಕೆ ಭೇಟಿ ನೀಡಿ ಫ್ಲ್ಯಾಟ್ ಆಯ್ಕೆ ಮಾಡಿಕೊಂಡು ನಂತರ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ. ashraya.karnataka.gov.in

ಫ್ಲ್ಯಾಟ್‌ಗಳನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ ಹಣ ಪಾವತಿ ಮಾಡಿರುವ ಅರ್ಜಿದಾರರ ಹೆಸರಿಗೆ ಫ್ಲ್ಯಾಟ್‌ಗಳನ್ನು ನೋಂದಣಿ ಮಾಡಲಾಗುತ್ತಿದೆ.

-ಸುಶೀಲಮ್ಮ, ವ್ಯವಸ್ಥಾಪಕ ನಿರ್ದೇಶಕಿ, ರಾಜೀವ್ ಗಾಂಧಿ ವಸತಿ ನಿಗಮ.