ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆಗೆ ಭಕ್ತಸಾಗರ

| Published : Apr 09 2024, 12:45 AM IST

ಸಾರಾಂಶ

ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಹನೂರು

ಚಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಅಮಾವಾಸ್ಯೆ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಾದಪ್ಪನ ದರ್ಶನ ಪಡೆದರು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳು ಅಮಾವಾಸ್ಯೆ ಪ್ರಯುಕ್ತ ಬುಡಕಟ್ಟು ಸಮುದಾಯದ ಬೇಡಗಂಪಣ ಅರ್ಚಕರು ಬೆಳಗಿನ ಜಾವ ಸ್ವಾಮಿಗೆ ವಿಶೇಷ ಅಮಾವಾಸ್ಯೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸದರು. ತ್ರಿಕಾಲ ಪೂಜೆ ಅಮಾವಾಸ್ಯೆ ಪ್ರಯುಕ್ತ ಮಲೆ ಮಾದೇಶ್ವರನಿಗೆ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ಮಧ್ಯಾಹ್ನ ಅರ್ಚಕರಿಂದ ಪೂಜೆ ಧಾರ್ಮಿಕವಾಗಿ ನಡೆಯಿತು.

ಸಾಂಪ್ರದಾಯಿಕ ಯುಗಾದಿ ಪೂಜೆ:

ಬುಡಕಟ್ಟು ಸಮುದಾಯದ ಧಾರ್ಮಿಕ ಪದ್ಧತಿಯಂತೆ ಅರಣ್ಯದಲ್ಲಿ ಸಿಗುವ ವಿವಿಧ ಬಗೆಯ ಹೂಗಳನ್ನು ಶೇಖರಿಸಿ ಸ್ವಾಮಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಗುವುದು ಕಾಡು ಮರದ ದೂಪದ ಅಭಿಷೇಕ, ಶಿವನಿಗೆ ಇಷ್ಟವಾದ ಬಿಲ್ವಾರ್ಚನೆ, ತುಂಬೆ ಹೂವಿನ ಅರ್ಚನೆ ಉತ್ಸವಾದಿಗಳು ಹಾಗೂ ಮಾದಪ್ಪನಿಗೆ ಪ್ರಿಯವಾದ ಎಳ್ಳುಂಡೆ ಪಂಚಾಮೃತ ಅಭಿಷೇಕ ಎಳ್ಳಿನಲ್ಲಿ ಮಾಡಿದ ಪಂಚಾಮೃತ ಒಬ್ಬಟ್ಟು ನೈವೇದ್ಯ ನಡೆಯಿತು. ಅಮಾವಾಸ್ಯೆ ಪೂಜೆಗೆ ಬಂದ ಭಕ್ತ ಸಾಗರ:

ಕಳೆದ 3 ದಿನಗಳಿಂದ ಚಂದ್ರಮಾನ ಯುಗಾದಿ ಹಬ್ಬ ಜಾತ್ರಾ ಮಹೋತ್ಸವದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಸಾರಿಗೆ ವಾಹನಗಳಲ್ಲಿ ಮತ್ತು ಸ್ವಂತ ವಾಹನಗಳಲ್ಲಿ ಬಂದಂತ ಭಕ್ತಾದಿಗಳು ಮಲೆ ಮಾದೇಶ್ವರನಿಗೆ ಇಷ್ಟಾರ್ಥ ಸಿದ್ಧಿಸುವಂತೆ ಹರಕೆ ಕಾಣಿಕೆ ಸಲ್ಲಿಸಿ ಮಾದೇಶ್ವರನ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಉಫೇ ಮಾದಪ್ಪ ಉಘೇ ಮಾದಪ್ಪ ಎಂದು ಭಕ್ತಿ ಪರಾಕಾಷ್ಠೆ ಮೆರೆದರು.

ಯುಗಾದಿಗೆ ನಾಲ್ಕುಲಕ್ಷ ಲಾಡು ತಯಾರಿ :

ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗಾಗಿ ಲಾಡು ಪ್ರಸಾದವನ್ನು 40 ಬಾಣಸಿಗರಿಂದ 4 ಲಕ್ಷ ಲಾಡು ತಯಾರಿಸಿ ದಾಸ್ತಾನು ಮಾಡಲಾಗಿದೆ. ನಾಳೆ ನಡೆಯುವ ಯುಗಾದಿ ರಥೋತ್ಸವದಲ್ಲಿ ಭಾಗವಹಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಲಾಡು ತಯಾರಿಸುವ ಘಟಕದಲ್ಲಿ ದಾಸ್ತಾನು ಮಾಡಲಾಗಿದೆ.

ಸುಡು ಬಿಸಿಲಲ್ಲೂ ಭಕ್ತರಿಂದ ಉರುಳುಸೇವೆ:

ರಾಜ್ಯದ ನಾನಾ ಜಿಲ್ಲೆ ಹಾಗೂ ತಮಿಳುನಾಡಿನಿಂದಲೂ ಅಪಾರ ಸಂಖ್ಯೆಯಲ್ಲಿ ಬಂದಿರುವ ಭಕ್ತಾದಿಗಳು ಇಷ್ಟಾರ್ಥ ಸಿದ್ಧಿಸುವಂತೆ ಹರಕೆ ಹೊತ್ತಿರುವ ಮಾದಪ್ಪನ ಭಕ್ತಾದಿಗಳು ದೇವಾಲಯ ರಾಜಗೋಪುರ ಮತ್ತು ಮುಖ್ಯದ್ವಾರ ಸಮೀಪದ ದೇವಾಲಯದ ಮುಂಭಾಗದಲ್ಲಿ ಬಿರು ಬಿಸಿಲು ಲೆಕ್ಕಿಸದೆ ಭಕ್ತಾದಿಗಳು ಉರುಳು ಸೇವೆ ಮಾಡಿ ಮಾದೇಶ್ವರನಿಗೆ ಹರಕೆ ತೀರಿ ಸುವ ಜೊತೆಗೆ ಹಣ್ಣು ಕಾಯಿ ಪೂಜೆ ಮಾಡಿಸಿ ದೂಪಹಾಕಿ ಕರ್ಪೂರ ಹಚ್ಚಿ ವಿವಿಧ ಉತ್ಸವಗಳಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.

ಸಾಲೂರು ಮಠದಲ್ಲಿ ಭಕ್ತ ವೃಂದ : ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯದಂತೆ ಮಲೆ ಮಾದೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಸಾಲೂರು ಮಠಕ್ಕೆ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಅಲ್ಲಿನ ದಾಸೋಹದಲ್ಲಿ ಪ್ರಸಾದ ಸೇವಿಸಿದರು.

ತುಂಬಿ ತುಳುಕಿದ ವಸತಿ ಗ್ರಹಗಳು:

ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಯುಗಾದಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಬಂದಿರುವ ಭಕ್ತಾದಿಗಳು ದೇವಾಲಯ ವ್ಯಾಪ್ತಿಯಲ್ಲಿ ಬರುವ ನಾಗಮಲೆ ಭವನ ಸೇರಿದಂತೆ ಎಲ್ಲಾ ವಸತಿಗೃಹಗಳು ತುಂಬಿ ತುಳುಕಿದ್ದು ದೇವಾಲಯದ ಮುಂಭಾಗದ ಡಾರ್ಮೆಂಟರಿ ಹಾಗೂ ಸಂಕಮ್ಮನ ನಿಲಯ ರಂಗ ಮಂದಿರ ವಿವಿಧಡೆ ಭಕ್ತ ಸಮೂಹವೇ ಹರಿದು ಬಂದಿತ್ತು.

ಬಾಕ್ಸ್....

ಇಂದು ಬೆಟ್ಟದಲ್ಲಿ ರಥೋತ್ಸವ

ಚಂದ್ರಮಾನ ಯುಗಾದಿ ಪ್ರಯುಕ್ತ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ 7.30 ರಿಂದ 9 ಗಂಟೆಯವರೆಗೆ ಮಹಾ ರಥೋತ್ಸವ ಜರುಗಲಿದೆ. ರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಜೊತೆಗೆ ಇಲ್ಲಿನ ಯುಗಾದಿ ಹಬ್ಬಕ್ಕೆ ತಮಿಳುನಾಡಿನಿಂದಲೂ ಸಹ ಹೆಚ್ಚಾಗಿ ಭಕ್ತಾದಿಗಳ ಅನುಕೂಲಕ್ಕಾಗಿ 350ಕ್ಕೂ ಹೆಚ್ಚು ಸಾರಿಗೆ ಬಸ್‌ ವ್ಯವಸ್ತೆ ಕಲ್ಪಿಸಲಾಗಿದೆ.