ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಯುವ ಜನರಲ್ಲಿ ಅಡಗಿರುವ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ನುಡಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಕ್ಷಾಗೃಹದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ನೆಹರು ಯುವ ಕೇಂದ್ರ ಹಾಗೂ ಯುವ ಸಂಘಗಳ ಒಕ್ಕೂಟ ಇವರ ಸಂಯುಕ್ತಾ ಶ್ರಯದಲ್ಲಿ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.ಯುವಜನೋತ್ಸವ ಯುವಜನರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದ್ದು, ಇಂತಹ ಉತ್ಸವ, ಸ್ಪರ್ಧೆಗಳಿಂದ ಯುವಜನರು ತಮ್ಮಲ್ಲಿರುವ ಪ್ರತಿಭೆ, ಕೌಶಲಗಳನ್ನು ಪ್ರದರ್ಶಿಸಲು ಸಹಕಾರಿಯಾಗಿದೆ. ಯುವಕರು ಈ ವೇದಿಕೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಚಿವರು ಜಿಲ್ಲೆಯ ಯುವ ಪ್ರತಿಭಾವಂತ ಹಾಗೂ ಉದಯೋನ್ಮುಖ ಕಲಾವಿದರು ರಾಜ್ಯ ಮಟ್ಟದಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಆಯ್ಕೆಯಾಗಿ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.ಗ್ರಾಮೀಣ, ನಗರ ಪ್ರದೇಶದ ಯುವಜನರಲ್ಲಿನ ಪ್ರತಿಭೆ ಅಸಾಮಾನ್ಯವಾಗಿದೆ. ಇಂತಹ ಪ್ರತಿಭೆಯನ್ನು ಹೊರತರಲು ಸರ್ಕಾರ ಯುವಜನೋತ್ಸವದ ವ್ಯವಸ್ಥೆ ಮಾಡಿದೆ. ಶಾಲಾ-ಕಾಲೇಜುಗಳಲ್ಲಿ ಓದಿನ ಕಡೆಗೆ ಹೆಚ್ಚಿನ ಗಮನ ಇರುತ್ತದೆ. ಆದರೆ ಓದಿನೊಂದಿಗೆ ತಮ್ಮಲ್ಲಿರುವ ಪ್ರತಿಭೆಗೂ ಸಹ ಮಹತ್ವ ನೀಡಬೇಕು. ಅತಿ ಹೆಚ್ಚು ಸಂಖ್ಯೆಯಲ್ಲಿ ಯುವಜನರನ್ನು ಹೊಂದಿರುವ ದೇಶ ನಮ್ಮದು. ಯುವ ಭಾರತವು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರಸ್ತುತ ಮುಂಚೂಣಿಯಲ್ಲಿದೆ. ಇಲ್ಲಿ ಸ್ಪರ್ಧಿಸಿದ ಯುವಜನತೆ ಉನ್ನತ ಮಟ್ಟದಲ್ಲಿ ಸಾಧನೆ ಮಾಡಲಿ ಎಂದರು.5 ರಿಂದ 29 ವರ್ಷದೊಳಗಿನ ಯುವಕ, ಯುವತಿಯರು, ನಾನಾ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೋಂದಣಿಯಾದ ಯುವಕ ಸಂಘಗಳು, ಯುವತಿ ಮಂಡಳಿಗಳು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿರೇಶ ನಾಯಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಎಸ್.ಸದಶಿವಪ್ಪ, ಮಲ್ಲಮ ಸೂಲಗಿತ್ತಿ ಸೇರಿ ನಗರಸಭೆಯ ಸದಸ್ಯರು ಹಾಗೂ ವಿವಿಧ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಇದ್ದರು.
300 ವಿದ್ಯಾರ್ಥಿಗಳಿಂದ ನೋಂದಣಿಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಜನಪದ ಗೀತೆ ಗಾಯನ, ಕವಿತೆ ಬರೆಯುವುದು, ಚಿತ್ರಕಲೆ, ಗುಡಿಕೈಗಾರಿಕೆಯ ಕಲಾ ಪ್ರಕಾರ, ನೇಕಾರಿಕೆ/ ಜವಳಿ, ಕೃಷಿ ಉತ್ಪನ್ನಗಳು ಶಾಸ್ತ್ರೀಯ ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳು ನುಡಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಯುವಪ್ರತಿಭೆಗಳಿಗೆ ಶಿಳ್ಳೆ, ಚಪ್ಪಾಳೆಗಳಿಂದ ಮೆಚ್ಚುಗೆ ವ್ಯಕ್ತವಾಯಿತು. ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯ ಕ್ರಮದಲ್ಲಿ ಸುಮಾರು 300 ವಿದ್ಯಾರ್ಥಿಗಳು ನೋಂದಣಿ ಮಾಡಲಾಯಿತು.