ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಆಧುನಿಕ ಯುಗದಲ್ಲಿ ಮೊಬೈಲ್‌ನ ವ್ಯಾಮೋಕಕ್ಕೆ ಮಕ್ಕಳು ಬಲಿಯಾಗುತ್ತಿದ್ದು ಇದಕ್ಕೆ ಪೋಷಕರು ಕಡಿವಾಣ ಹಾಕಬೇಕು ಹಾಗೂ ಮಕ್ಕಳ ಚಲನವಲನಗಳನ್ನು ಗಮನಿಸಿ ಅವರು ಉತ್ತಮ ಮಾರ್ಗದೆಡೆಗೆ ನಡೆಯಲು ಪ್ರೇರೆಪಿಸಬೇಕು ಎಂದು ಪಿಡಿಒ ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.ತಾಲ್ಲೂಕಿನ ಕೆಂಚರ‍್ಲಹಳ್ಳಿಯ ಸಮುದಾಯ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳು ಪುಸ್ತಕ ಓದುವುದು, ರಾಮಾಯಣ, ಮಹಾಭಾರತ, ದಿನಪತ್ರಿಕೆಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹೇಳಿದರು.
ಉತ್ತಮ ಮಾರ್ಗದರ್ಶನ ನೀಡಿಮನೆಯೇ ಮೊದಲ ಪಾಠಶಾಲೆ, ತಂದೆ ತಾಯಿಗಳೇ ಮಕ್ಕಳ ಮೊದಲ ಗುರುಗಳಾಗಿದ್ದು, ಮಕ್ಕಳನ್ನು ಚಿಕ್ಕಂದ್ದಿನಲ್ಲೇ ಉತ್ತಮ ವಾತಾವರಣದಲ್ಲಿ ಬೆಳೆಸಿದಾಗ ಅವರು ಮುಂದಿನ ಜೀವನದಲ್ಲಿ ಮೌಲ್ಯಾಧಾರಿತ ಗುಣಗಳನ್ನು ಅಳವಡಿಸಿಕೊಂಡು ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆಂದರು.
ಹೆಣ್ಣು ಮಕ್ಕಳು ಧೈರ್ಯ ವಹಿಸಿಮಾಜಿ ಗ್ರಾ.ಪಂ. ಅಧ್ಯಕ್ಷ ಬ್ಯಾಂಕ್ ಕೃಷ್ಣಾರೆಡ್ಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆ ೬೧೧ ಆಗಿದ್ದು ಚಿಂತಾಮಣಿ ತಾಲ್ಲೂಕಿನಲ್ಲಿ ೩೭ ಪ್ರಕರಣಗಳಿವೆಂದು ಇವೆಲ್ಲವುಗಳಿಗೂ ಕಡಿವಾಣ ಹಾಕಬೇಕೆಂದರೆ ಹೆಣ್ಣು ಮಕ್ಕಳು ಭಯಭೀತಿಗೊಳಗಾಗದೇ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ತುರ್ತು ಸಂದರ್ಭದಲ್ಲಿ ೧೦೯೮ ಸಂಖ್ಯೆಗೆ ಕರೆ ಮಾಡುವುದರ ಮೂಲಕ ಸಹಾಯ ಪಡೆಯಬೇಕು ಎಂದರು.
ನೋಡೆಲ್ ಅಧಿಕಾರಿ ಕೃಷಿ ಇಲಾಖೆಯ ನಾಗರ್ಜುನ ಮಾತನಾಡಿದರು. ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ, ಅಟಲ್ ಭೂಜಲ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಯೋಜಕ ಶ್ರೀರಾಮ್, ಗ್ರಾ.ಪಂ. ಸದಸ್ಯ ರಾಮಚಂದ್ರ, ಕರವಸೂಲಿಗಾರ ಮಂಜುನಾಥ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.