ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಅಕ್ಷರ, ಅನ್ನ, ಆರೋಗ್ಯ ಇವು ವ್ಯಕ್ತಿತ್ವ ವಿಕಾಸದ ಮೂಲ ಕೃತಿಗಳಾಗಿದ್ದು ಇದರಿಂದ ಮಾತ್ರವೇ ಸಮಾಜದ ಸುಧಾರಣೆ ಸಾಧ್ಯ ಎಂದು ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ. ಗಿರಿಗೌಡ ಅಭಿಪ್ರಾಯಪಟ್ಟರು.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗು ತಾಲೂಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೆ.ಆರ್. ಷಣ್ಮುಖಸ್ವಾಮಿ ಅವರ ನೂರೆಂಟು ಸೂಕ್ತಿಗಳು ಪುಸ್ತಕ ಬಿಡುಗಡೆ ಹಾಗು ವೀರ ಮಡಿವಾಳ ಮಾಚಿದೇವರ ಜಯಂತಿ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅವರು, ಆರೋಗ್ಯ, ಅನ್ನ ಮತ್ತು ಆಯಸ್ಸು ಇದ್ದರೆ ಮಾತ್ರ ವ್ಯಕ್ತಿತ್ವ ವಿಕಾಸವಾಗುತ್ತದೆ. ಹಾಗಾಗಿ ಸಮಾಜದ ಉದ್ದಾರ ಮಾಡಬೇಕಾದರೆ ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಅನೇಕ ಬಾರಿ ನಾವು ತ್ರಿಪದಿಯಲ್ಲಿ ದಾಸ ಪಂಥ, ವ್ಯಾಸಪಂಥದ ಬಗ್ಗೆ ಉಲ್ಲೇಖ ಮಾಡುತ್ತೇವೆ. ದಾಸಪಂಥವನ್ನುನ ಕನಕದಾಸರು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ರಚನೆ ಮಾಡಿದ್ದಾರೆ. ಹಾಗೆಯೇ ಎರಡು ಪಂಥಗಳಲ್ಲಿ ಜನ ಸಾಮಾನ್ಯರನ್ನು ಆಕರ್ಷಣೆ ಮಾಡುವ ಪಂಥ ಎಂದರೆ ಅದು ದಾಸಪಂಥವಾಗಿದೆ. ಪುರಂದರದಾಸರು, ಕನಕದಾಸರು ಎಲ್ಲಾ ತ್ಯಾಗ ಮಾಡಿ ಜಾಗಟೆ ಹಿಡಿದು ಹಳ್ಳಿ ಹಳ್ಳಿಗೆ ಹೋಗಿ ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು.ನಾವು ಎಷ್ಟೇ ದೊಡ್ಡವರಾದರೂ ಕೂಡ ಸಮಾಜದಲ್ಲಿ ಕಿರಿಯರಾಗಿ ಕಾಣಬೇಕು ಎಂದು ಸರ್ವಜ್ಞನ ವಚನ ಹೇಳುತ್ತದೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಮಾತನಾಡಿ, ಸರ್ಕಾರ ಇತ್ತೀಚೆಗೆ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆಯಾದರೂ ಯಾಕೋ ರಾಜ್ಯದಲ್ಲಿ ಸೂಕ್ತವಾದ ಸಂಭ್ರಮ ಕಾಣುತ್ತಿಲ್ಲ. ಹಾಗಾಗಿ ವಿಶ್ವಗುರು ಬಸವಣ್ಣ ಅವರನ್ನು ಯಾಕಾಗಿ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿದೆ ಎಂಬ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು 9 ತಾಲೂಕಿನಲ್ಲೂ ವಿಶ್ವ ಗುರು ಬಸವಣ್ಣ ಎಂಬ ವಿಷಯದ ಬಗ್ಗೆ ಸರಣಿ ಉಪನ್ಯಾಸ ಪ್ರಾರಂಭಿಸಲಿದೆ ಎಂದರು.ವಿಶ್ವಕ್ಕೆ ಬಸವಣ್ಣ ಅವರ ಕೊಡುಗೆ ಏನು ಎಂದು ತಿಳಿಸುವ ಪ್ರಯತ್ನ ಮಾಡಲಾಗಿತ್ತದೆ. ನಂಜನಗೂಡು, ಟಿ. ನರಸೀಪುರ ಸೇರಿದಂತೆ ಎಲ್ಲಾ ತಾಲೂಕುಗಳಲ್ಲೂ ಈ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಬಸವ ರಥವನ್ನು ಎಲ್ಲಹಳ್ಳಿಗಳಿಗೂ ಕೊಂಡೊಯ್ಯುವ ಕೆಲಸವನ್ನು ಸಾಹಿತ್ಯ ಪರಿಷತ್ತು ಮಾಡಲಿದೆ. ಬಸವಣ್ಣನವರ ವಚನ ಮತ್ತು ಸಂದೇಶಗಳನ್ನು ತಿಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ. ರಾಜು, ವೀರ ಮಡಿವಾಳ ಮಾಚಿದೇವರ ಜಯಂತಿ ಕುರಿತಂತೆ ಸುಧೀರ್ಘ ಉಪನ್ಯಾಸ ನೀಡಿದರು.ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಡಾ. ಮಂಗಳಮೂರ್ತಿ, ಡಾ. ಪ್ರದೀಪ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ತೊಂಟೇಶ್, ಪೂಜಿತ್ ಕುಮಾರ್, ಪಟೇಲ್ ಪರಮೇಶ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ವಕೀಲ ಜ್ಞಾನೇಂದ್ರ ಮೂರ್ತಿ, ಕೋಲಾರ ಜಿಲ್ಲೆಯ ಓಂಕಾರ ಪ್ರಿಯ ಬಾಗೇಪಲ್ಲಿ, ಸಿದ್ದರಾಜು, ರಾಜೇಂದ್ರ, ಅಂಜನ್, ಮಹದೇವ್ ಶೆಟ್ಟಿ, ಜಾನಕಮ್ಮ, ಜೈ ಲಕ್ಷ್ಮಿ, ಧರ್ಮಯ್ಯನಹುಂಡಿ ಕುಮಾರ್, ಹೆಳವರಹುಂಡಿ ಮೂರ್ತಿ, ಸಿದ್ದಲಿಂಗಸ್ವಾಮಿ, ಪ್ರಭುಸ್ವಾಮಿ, ಅಕ್ಕಿ ನಾಗಪ್ಪ, ಯೋಗೇಶ್, ಮಲ್ಲೇಶ್, ರಾಜಶೇಖರ್, ಅಂಗಡಿ ನಾಗೇಶ್, ಗುರುಪ್ರಸಾದ್ ಇದ್ದರು.