ಸಾರಾಂಶ
ತಾಲೂಕು ನೌಕರರ ಸಂಘದ ಗೌರವ ಅಧ್ಯಕ್ಷ ಮಾಹಿತಿಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯನ್ನು ಈಡೇರಿಸಲು ಫೆ.೨೭ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಹಕ್ಕೊತ್ತಾಯ ಮಾಡಲಾಗುವುದು ಎಂದು ತಾಲೂಕು ನೌಕರರ ಸಂಘದ ಗೌರವ ಅಧ್ಯಕ್ಷ ವಿ.ಜಿ. ದ್ಯಾವೇಗೌಡ ತಿಳಿಸಿದ್ದಾರೆ.ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಫೆ.೨೭ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ಹಕ್ಕು, ನೆಮ್ಮದಿಯ ಬದುಕಿಗಾಗಿ ನಮ್ಮ ನ್ಯಾಯಯುತ ಬೇಡಿಕೆಗಳಾದ ಹಳೆಯ ಪಿಂಚಣಿ ಯೋಜನೆಯ ಮರು ಸ್ಥಾಪಿಸುವುದು, ಏಳನೇ ವೇತನ ವರದಿ ಅನುಷ್ಠಾನ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಲೋಕಾರ್ಪಣೆ ಸೇರಿ ಮೂರು ಬೇಡಿಕೆಗಳನ್ನು ಸಮ್ಮೇಳನದಲ್ಲಿ ಮಂಡನೆ ಮಾಡಲಿದ್ದೇವೆ. ಈ ಸಮ್ಮೇಳನಕ್ಕೆ ಮೂರು ಲಕ್ಷ ನೌಕರರು ಭಾಗವಹಿಸುವ ನಿರೀಕ್ಷೆ ಇದೆ. ತಾಲೂಕಿನಿಂದ ೧೦ ಬಸ್‌ಗಳಲ್ಲಿ ಸಾವಿರ ನೌಕರರು ಸಮ್ಮೇಳನಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಸರ್ಕಾರಿ ನೌಕರರ ವೃತ್ತಿಗೆ ಪೂರಕವಾಗಿರುವ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಆಡಳಿತದಲ್ಲಿ ಕಾರ್ಯಕ್ಷಮತೆ ಕುರಿತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನೌಕರರ ಆರೋಗ್ಯ ಸುಧಾರಣೆ ಕುರಿತು ಡಾ.ಸಿ.ಎನ್. ಮಂಜುನಾಥ್ ವಿಶೇಷ ಉಪನ್ಯಾಸವನ್ನು ನೀಡಲಿದ್ದಾರೆ. ಅಂದು ಬೆಳಗ್ಗೆ ಏಳು ಗಂಟೆಗೆ ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಸಮ್ಮೇಳನವನ್ನು ಅಂದು ಬೆಳಿಗ್ಗೆ ಏಳು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಡಿಸಿಎಂ, ಸಚಿವರೂ, ಶಾಸಕರು ಸೇರಿದಂತೆ ವಿವಿಧ ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕೆ ಎಲ್ಲಾ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಬಸ್ ವ್ಯವಸ್ಥೆ ಸೇರಿದಂತೆ ಎಲ್ಲಾ ಸದಸ್ಯರಿಗೂ ಕಾರ್ಯಕ್ರಮಕ್ಕೆ ಹೋಗಿ ಬರುವ ವ್ಯವಸ್ಥೆಯನ್ನು ಮಾಡಲಾಗಿದೆ. ಪಟ್ಟಣದ ನಗರ ಪೊಲೀಸ್ ಠಾಣೆ ಎದುರಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಸ್ ನಿಲ್ಲಿಲಿದ್ದು ಎಲ್ಲರೂ ಸರಿಯಾದ ಸಮಯಕ್ಕೆ ಆಗಮಿಸಬೇಕು. ನೌಕರರ ಬೇಡಿಕೆಗಳನ್ನು ಈಡೇರಿಸಲು ಒಗ್ಗಟ್ಟು ತೋರಿಸಬೇಕು ಎಂದರು.
ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಟಿ. ಮಂಜಪ್ಪ, ಖಜಾಂಚಿ ವಿಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮೂರ್ತಿ, ಮಾಜಿ ಖಜಾಂಚಿ ಆನಂದಮೂರ್ತಿ ಭಾಗವಹಿಸಿದ್ದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ನೌಕರರ ಸಂಘದ ಗೌರವ ಅಧ್ಯಕ್ಷ ವಿ. ಜಿ ದ್ಯಾವೇಗೌಡ.