ಸಾರಾಂಶ
ಹುಬ್ಬಳ್ಳಿ: ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಬೀಗಿರುವ ಕಾಂಗ್ರೆಸ್, ಇದೀಗ ಜಿಪಂ, ತಾಪಂ ಚುನಾವಣೆಗಳತ್ತ ಗಮನ ಹರಿಸಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂದು ಈಗಿನಿಂದಲೇ ಚುನಾವಣೆ ತಯಾರಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿದರು. ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷದ ಗೆಲುವಿಗೆ ಶ್ರಮಿಸಿ ಎಂದು ಕ್ಲಾಸ್ ತೆಗೆದುಕೊಂಡರು.
ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಕುರಿತು ಯಾವ ರೀತಿ ತಯಾರಿ ನಡೆಸಬೇಕು ಎಂಬುದನ್ನು ತಿಳಿ ಹೇಳಿದರು.
ಮುಂಬರುವ ದಿನಗಳಲ್ಲಿ ಜಿಪಂ, ತಾಪಂ ಚುನಾವಣೆ ನಡೆಯಲಿದ್ದು, ಎಲ್ಲ ಜಿಪಂ ಕ್ಷೇತ್ರ, ವಿಧಾನಸಭಾ ಕ್ಷೇತ್ರ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಲಾಗುವುದು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕ ಯಶಸ್ಸು ಲೋಕಸಭಾ ಚುನಾವಣೆಯಲ್ಲಿ ಸಿಗಲಿಲ್ಲ. ಜಿಪಂ, ತಾಪಂ ಚುನಾವಣೆಯಲ್ಲಿ ಆ ರೀತಿ ಆಗಬಾರದು. ಅದಕ್ಕೆ ಎಲ್ಲ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಶ್ರಮಿಸಬೇಕು. ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಬದಿಗಿಟ್ಟು ಪಕ್ಷಕ್ಕಾಗಿ ದುಡಿಯಬೇಕು ಎಂದು ಹೇಳಿದರು.
ಬೂತ್ ಸಶಕ್ತಗೊಳಿಸಿ
ಬೂತ್‌ಗಳನ್ನು ಸಶಕ್ತಗೊಳಿಸಿದಾಗ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಆ ನಿಟ್ಟಿನಲ್ಲಿ 15 ದಿನಗಳಲ್ಲಿ ಬೂತ್ ಸಮಿತಿ, ಟೌನ್ ಸಮಿತಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚಿಸಿ, ಅವುಗಳಿಗೆ ಅಧ್ಯಕ್ಷರು ಮತ್ತು ಸಂಯೋಜಕರನ್ನು ನೇಮಕ ಮಾಡಬೇಕು ಎಂದು ಸೂಚಿಸಿದರು.
ಪಕ್ಷದಲ್ಲಿ ದುಡಿದವರಿಗೆ ಸೂಕ್ತ ಸ್ಥಾನಮಾನ ಸಿಕ್ಕೇ ಸಿಗುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು. ಕಾರ್ಯಕರ್ತರನ್ನು ವಿವಿಧ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವ ಕುರಿತು ಪಟ್ಟಿ ಸಿದ್ಧವಾಗಿದೆ. ಪರಿಶೀಲನೆ ಬಳಿಕ ಶೀಘ್ರ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರದ ವಿರುದ್ಧ ಹೋರಾಟ
ಎದುರಾಳಿ ಪಕ್ಷದ ಶಾಸಕರ ಕ್ಷೇತ್ರದಲ್ಲಿನ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡಲು ಮುಂದಾಗಿರುವ ಕೇಂದ್ರದ ವಿರುದ್ಧ ಹೋರಾಟ ರೂಪಿಸಬೇಕು ಎಂದರು.
ಕೆಪಿಸಿಸಿ ಉಪಾಧ್ಯಕ್ಷ ವೈ. ಸಯೀದ್ ಅಹ್ಮದ್ ಮಾತನಾಡಿ, ಹುಬ್ಬಳ್ಳಿ ನಗರ, ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪಕ್ಷದ ಮುಖಂಡರಿಗೆ ಅರಿವಿಲ್ಲ. ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಗುಂಪುಗಾರಿಕೆ, ಒಬ್ಬರನ್ನೊಬರು ಎತ್ತಿ ಕಟ್ಟುವುದನ್ನು ಬಿಟ್ಟು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ಮುಂದೆ ಅಧೊಕಾರ ಕಷ್ಟ
ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದಾಗಲೂ ಜಿಪಂ, ತಾಪಂ ಚುನಾವಣೆಯಲ್ಲಿ ಸೋತರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ವಾತಿ ಮಳಗಿ ಮಾತನಾಡಿ, ಕಾರ್ಯಕರ್ತರಿಗೆ ಸ್ಥಾನಮಾನ ಸಿಗುತ್ತಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಯುವ ಮುಖಂಡ ವಿನೋದ ಅಸೂಟಿ, ಗಂಗಾಧರ ದೊಡ್ಡವಾಡ ಮಾತನಾಡಿದರು. ಹುಬ್ಬಳ್ಳಿ –ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ, ಎಂ.ಎಸ್. ಅಕ್ಕಿ, ಯೂಸೂಫ್ ಸವಣೂರು, ಅನ್ವರ್ ಮುಧೋಳ, ಎಸ್.ಆರ್.ಪಾಟೀಲ ಇದ್ದರು.
ಪಾಲಿಕೆ ಸದಸ್ಯರ ಗೈರು
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನ 36 ಜನ ಸದಸ್ಯರಿದ್ದಾರೆ. ಆದರೆ, ಸಭೆಗೆ ಮಾತ್ರ ಒಬ್ಬರೇ ಬಂದಿದ್ದರು. ಹೀಗಾಗಿ, ಇದನ್ನು ಪ್ರಶ್ನಿಸಿದ ಮಯೂರ್ ಜಯಕುಮಾರ, ಪಾಲಿಕೆಯ ಕಾಂಗ್ರೆಸ್‌ನ ಎಲ್ಲ ಸದಸ್ಯರು ಏಕೆ ಬಂದಿಲ್ಲ? ಸಭೆಗೆ ಒಬ್ಬರು ಮಾತ್ರ ಬಂದಿದ್ದಾರೆ. ಉಳಿದವರು ಏಕೆ ಬಂದಿಲ್ಲ? ಗೆದ್ದ ನಂತರ ಪಕ್ಷದ ಅವಶ್ಯಕತೆ ಇಲ್ಲ ಎಂಬಂತೆ ವರ್ತನೆ ಮಾಡುವುದು ಸರಿಯಲ್ಲ. ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವರನ್ನು ಪಕ್ಷ ಕಾಪಾಡುತ್ತದೆ. ಕೆಲಸ ಮಾಡದವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಇದೇ ವೇಳೆ ನೀಡಿದರು.
ಯುವಕರಿಗೆ ಟಿಕೆಟ್ ನೀಡಿ
ಜಿಲ್ಲೆಯಲ್ಲಿ ಯುವ ನಾಯಕತ್ವ ಬೆಳೆಸಬೇಕಿದೆ. ಹೀಗಾಗಿ, ಜಿಪಂ, ತಾಪಂ ಚುನಾವಣೆಯಲ್ಲಿ ಯುವಕರಿಗೆ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ ಹೇಳಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವರು ವಿರೋಧ ಪಕ್ಷದವರ ಜತೆ ಹೊಂದಾಣಿಕೆ ಮಾಡಿಕೊಂಡರು. ಕೆಲವರ ಕುತಂತ್ರದಿಂದಾಗಿ ವಿನೋದ ಅಸೂಟಿ ಸೋಲಬೇಕಾಯಿತು. ಜಿಪಂ, ತಾಪಂ ಚುನಾವಣೆಯಲ್ಲಿ ಆ ರೀತಿ ಆಗಬಾರದು ಎಂದರು. ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಪಕ್ಷ ನಿಷ್ಠೆಯಿಂದ ಕೆಲಸ ಮಾಡಬೇಕು. ಹೊಂದಾಣಿಕೆ ರಾಜಕಾರಣ ಬಿಡಬೇಕು ಎಂದು ಹೇಳಿದರು.