ದೂರು ಬಂದ್ರೆ ಹನಿಟ್ರ್ಯಾಪ್‌ ತನಿಖೆ ನಡೆಸಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

| N/A | Published : Mar 24 2025, 09:06 AM IST

Congress President Mallikarjun Kharge (File Photo/ANI)

ಸಾರಾಂಶ

ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಜೋರಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದು, ಹನಿಟ್ರ್ಯಾಪ್‌ ದೂರು ಬಂದರೆ ತನಿಖೆ ನಡೆಸಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

 ಬೆಂಗಳೂರು : ರಾಜ್ಯದಲ್ಲಿ ಹನಿಟ್ರ್ಯಾಪ್ ವಿವಾದ ಜೋರಾದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದು, ಹನಿಟ್ರ್ಯಾಪ್‌ ದೂರು ಬಂದರೆ ತನಿಖೆ ನಡೆಸಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಅವರ ಪುತ್ರ ಪರಿಷತ್‌ ಸದಸ್ಯ ರಾಜೇಂದ್ರ ವಿರುದ್ಧ ಹನಿಟ್ರ್ಯಾಪ್‌ ಯತ್ನ ಪ್ರಕರಣ ತೀವ್ರ ಚರ್ಚೆ ಹುಟ್ಟುಹಾಕಿದೆ. ಸದನದಲ್ಲೂ ತೀವ್ರ ಗದ್ದಲ ಸೃಷ್ಟಿಸಿದ್ದು, ಈ ಬಗ್ಗೆ ಪಕ್ಷದ ನಾಯಕರ ಮೇಲೆಯೇ ಅನುಮಾನ ಹುಟ್ಟುವಂಥ ಹೇಳಿಕೆಗಳು ಹೊರಬೀಳುತ್ತಿವೆ. ಇದರ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ಇದರ ನಡುವೆಯೇ ಬುಧವಾರ ಅಥವಾ ಗುರುವಾರ ಪ್ರಕರಣದ ಬಗ್ಗೆ ದೂರು ನೀಡಲು ನಿರ್ಧರಿಸಿದ್ದ ಸಚಿವ ಕೆ.ಎನ್‌. ರಾಜಣ್ಣ ಅವರು ಮೊದಲು ಹೈಕಮಾಂಡ್‌ ಭೇಟಿ ಮಾಡಲು ತೀರ್ಮಾನಿಸಿದ್ದಾರೆ. ಹೈಕಮಾಂಡ್‌ಗೆ ವಿವರಣೆ ನೀಡಿದ ಬಳಿಕ ದೂರು ನೀಡಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊಹಾಪೋಹಕ್ಕೆ ತೆರೆ ಎಳೆಯೋಣ: ಇನ್ನು ಹನಿಟ್ರ್ಯಾಪ್‌ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಹನಿಟ್ರ್ಯಾಪ್‌ ವಿಚಾರವಾಗಿ ದೂರು ನೀಡಿದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ. ಈ ಬಗ್ಗೆ ಹೈಕಮಾಂಡ್‌ಗೂ ವರದಿ ನೀಡಿ. ಈ ಮೂಲಕ ಪಕ್ಷದಲ್ಲಿ ಉಂಟಾಗಿರುವ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡೋಣ ಎಂದು ಸಲಹೆ ನೀದ್ದಾರೆ ಎನ್ನಲಾಗಿದೆ.

ಹನಿಟ್ರ್ಯಾಪ್ ಯತ್ನ ಬಗ್ಗೆ ಸಚಿವ ರಾಜಣ್ಣ ಸದನದಲ್ಲೇ ಹೇಳಿಕೆ ನೀಡಿರುವುದು ಸರ್ಕಾರ ಮಟ್ಟದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದು, ಬಿಜೆಪಿಯೂ ಈ ಬಗ್ಗೆ ಹೋರಾಟ ನಡೆಸಲು ಸಜ್ಜಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಉನ್ನತಮಟ್ಟದ ತನಿಖೆ ಭರವಸೆ ನೀಡಿದ್ದಾರೆ. ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ಇಲ್ಲಿನವರನ್ನೇ ಕೇಳಿ: ಖರ್ಗೆ

ಹನಿಟ್ರ್ಯಾಪ್‌ ವಿಚಾರದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಅದನ್ನೆಲ್ಲ ನಾವು ಮಾತನಾಡಲು ಆಗುವುದಿಲ್ಲ. ಇಲ್ಲಿನವರನ್ನೇ ಕೇಳಿ’ ಎಂದಷ್ಟೇ ಹೇಳಿದರು.