ಪಾದಯಾತ್ರೆಯೊಂದಿಗೆ ‘ಜೆಡಿಎಸ್ ಅಂತಿಮಯಾತ್ರೆ’: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ

| Published : Jan 31 2024, 02:20 AM IST

ಪಾದಯಾತ್ರೆಯೊಂದಿಗೆ ‘ಜೆಡಿಎಸ್ ಅಂತಿಮಯಾತ್ರೆ’: ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯೊಂದಿಗೆ ಜೆಡಿಎಸ್ ಅಂತಿಮಯಾತ್ರೆಯೂ ನಡೆದಿದೆ. ಅಲ್ಲಿಗೆ ಪ್ರಾದೇಶಿಕ ಪಕ್ಷದ ಸಮಾಧಿಯೂ ಆದಂತಾಗಿದೆ. ಕುಮಾರಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಿರೆ ನೋವಾಗುತ್ತಿರಲಿಲ್ಲ. ತಮ್ಮ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥ ರಾಜಕೀಯ ಸಾಧನೆಗೆ ಜಯಪ್ರಕಾಶ್ ನಾರಾಯಣ್, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್.ಪಟೇಲ್‌ರಂಥವರು ಪ್ರಾದೇಶಿಕ ಪಕ್ಷದ ಉಳಿವಿಗೆ ನಡೆಸಿದ ಹೋರಾಟಕ್ಕೆ ತಿಲಾಂಜಲಿ ಹಾಡಿರುವುದು ತೀವ್ರ ನೋವುಂಟುಮಾಡಿದೆ.

ಕನ್ನಡಪ್ರಭ ವಾರ್ತೆ ಮಂಡ್ಯಬಿಜೆಪಿಯವರ ಜೊತೆ ಸೇರಿಕೊಂಡಿರುವ ಜೆಡಿಎಸ್ ಮಂಡ್ಯ ನೆಲದಲ್ಲಿ ಕೋಮು ಬೀಜ ಬಿತ್ತನೆ ಮಾಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯವನ್ನು ಮಂಗಳೂರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ಜಿಲ್ಲೆಯಲ್ಲಿ ನಿನ್ನೆ ನಡೆದ ಪಾದಯಾತ್ರೆಯೊಂದಿಗೆ ಜೆಡಿಎಸ್ ಅಂತಿಮಯಾತ್ರೆಯೂ ನಡೆದಿದೆ. ಅಲ್ಲಿಗೆ ಪ್ರಾದೇಶಿಕ ಪಕ್ಷದ ಸಮಾಧಿಯೂ ಆದಂತಾಗಿದೆ. ಕುಮಾರಸ್ವಾಮಿ ಅವರು ಬಿಜೆಪಿ ಸೇರ್ಪಡೆಯಾಗಿದ್ದಿರೆ ನೋವಾಗುತ್ತಿರಲಿಲ್ಲ.

ತಮ್ಮ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥ ರಾಜಕೀಯ ಸಾಧನೆಗೆ ಜಯಪ್ರಕಾಶ್ ನಾರಾಯಣ್, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ.ಎಚ್.ಪಟೇಲ್‌ರಂಥವರು ಪ್ರಾದೇಶಿಕ ಪಕ್ಷದ ಉಳಿವಿಗೆ ನಡೆಸಿದ ಹೋರಾಟಕ್ಕೆ ತಿಲಾಂಜಲಿ ಹಾಡಿರುವುದು ತೀವ್ರ ನೋವುಂಟುಮಾಡಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಷ್ಟ್ರಧ್ವಜ ವಿರುದ್ಧ ನಿಲುವು:

ಹಸಿರು ಬಾವುಟ, ಹಸಿರು ಟವಲ್ ಹಾಕಿಕೊಂಡು ರೈತರ ಪರವಾಗಿ ಧ್ವನಿ ಎತ್ತಿ ಹೋರಾಟ ನಡೆಸುತ್ತಿದ್ದವರು ಈಗ ಕೇಸರಿ ಶಾಲನ್ನು ಧರಿಸಿ ರಾಷ್ಟ್ರಧ್ವಜದ ವಿರುದ್ಧ ನಿಂತಿದ್ದಾರೆ. ರಾಷ್ಟ್ರಧ್ವಜವನ್ನು ಕೆಳಗಿಳಿಸುವುದು ಇವರ ಹೋರಾಟದ ಉದ್ದೇಶವಿರುವಂತೆ ಕಂಡುಬರುತ್ತಿದೆ. ಪ್ರಜಾಪ್ರಭುತ್ವ, ಸಂವಿಧಾನದ ವಿರುದ್ಧ ಹೋರಾಟ ನಡೆಸುವುದು ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರಿಗೆ ಶೋಭೆ ತರುವುದಿಲ್ಲ ಎಂದು ಕುಟುಕಿದರು.

ಎರಡು ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಲು ಮಂಡ್ಯ ಜನರು ಕಾರಣ ಎನ್ನುವುದನ್ನು ಮರೆಯಬಾರದು. ನೀವು ಈ ಜಿಲ್ಲೆಯ ಜನರ ಋಣದಲ್ಲಿದ್ದೀರಿ. ಸ್ವಂತ ಜಿಲ್ಲೆಯವರಿಗಿಂತ ಹೆಚ್ಚಿನ ಪ್ರೀತಿ, ಮಹತ್ವವನ್ನು ಕೊಟ್ಟಿದ್ದಾರೆ. ಅಂತಹ ಜಿಲ್ಲೆಯ ಜನರ ನೆಮ್ಮದಿ ಹಾಳು ಮಾಡಿರುವುದು. ಅಶಾಂತಿ ಸೃಷ್ಟಿಸುವ ಕಡೆ ಹೆಜ್ಜೆ ಇಟ್ಟಿರುವುದನ್ನು ಜಿಲ್ಲೆಯ ಜನರು ಒಪ್ಪುವುದಿಲ್ಲ. ಇದು ಅತ್ಯಂತ ನೋವಿನ ಸಂಗತಿ ಎಂದರು.

ಜಿಲ್ಲೆಗೆ ಎಚ್‌ಡಿಕೆ ಕೊಡುಗೆ ಏನು?

ಎರಡು ಬಾರಿ ಮುಖ್ಯಮಂತ್ರಿಯಾದ ಸಮಯದಲ್ಲೂ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಶಾಶ್ವತ ಕೊಡುಗೆಗಳನ್ನು ನೀಡಲಿಲ್ಲ. ನಷ್ಟದಲ್ಲಿ ಸಿಲುಕಿ ಸ್ಥಗಿತಗೊಂಡಿದ್ದ ಮೈಷುಗರ್ ಕಾರ್ಖಾನೆಗೆ ಚಾಲನೆ ಕೊಡಿಸಲಿಲ್ಲ. ಹೊಸ ಕಂಪನಿಯನ್ನು ಸ್ಥಾಪಿಸುವುದಕ್ಕೆ ಅಸಕ್ತಿ ತೋರಲಿಲ್ಲ. ಜಿಲ್ಲೆಯ ಪ್ರಗತಿಗೆ ಪ್ರಾಮುಖ್ಯತೆ ನೀಡಲಿಲ್ಲ. ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿಲ್ಲ. ಅಷ್ಟಕ್ಕೂ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂಬುದನ್ನು ಹೇಳುವುದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡಲು ಬಂದಿರುವುದು ದುರದೃಷ್ಟಕರ ಎಂದು ನಯವಾಗಿ ಚುಚ್ಚಿ ಮಾತನಾಡಿದರು.

ಎಚ್‌ಡಿಕೆ ಬಿಜೆಪಿಯನ್ನು ಬೈದಷ್ಟು ಕಾಂಗ್ರೆಸ್ ಬೈದಿಲ್ಲ:

ಎಚ್.ಡಿ. ಕುಮಾರಸ್ವಾಮಿಯವರು ಬಿಜೆಪಿ, ಆರ್‌ಎಸ್‌ಎಸ್‌ನ್ನು ಬೈದಿರುವಷ್ಟು ಕಾಂಗ್ರೆಸ್ ಕೂಡ ಬೈದಿಲ್ಲ. ಯಡಿಯೂರಪ್ಪ, ಬಿಜೆಪಿ ನಿಲುವುಗಳು, ಆರ್‌ಎಸ್‌ಎಸ್ ಕಾರ್ಯವೈಖರಿ ಕುರಿತಂತೆ ಅಷ್ಟೊಂದು ಕಠೋರವಾಗಿ ಟೀಕಿಸಿ ಇಂದು ಪಕ್ಷದ ಹೀನಾಯಸ್ಥಿತಿಯೊಳಗೆ ಬಿಜೆಪಿಯವರೊಂದಿಗೆ ಸೇರಿಕೊಂಡು ಅವರ ಪರವಾಗಿಯೇ ಮಾತನಾಡುತ್ತಿರುವುದಕ್ಕೆ ಏನೆನ್ನಬೇಕೋ ತಿಳಿಯದಾಗಿದೆ ಎಂದು ಅವರ ಹಿಂದಿನ ಹೇಳಿಕೆಗಳನ್ನೆಲ್ಲಾ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು.

ಗೋಷ್ಠಿಯಲ್ಲಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಕೆ.ಎಂ.ಉದಯ್, ಪಿ.ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ರುದ್ರಪ್ಪ ಇದ್ದರು.