ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಐಕ್ಯತೆ, ಸೌಹಾರ್ದತೆ, ಸಹಬಾಳ್ವೆಗೆ ಅಡ್ಡಿಯಾಗಿರುವ ಬಿಜೆಪಿಯನ್ನು ದೇಶದ ಆಡಳಿತದಿಂದ ದೂರವಿಡುವುದೇ ಗಾಂಧೀಜಿಗೆ ಸಲ್ಲಿಸುವ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹಾತ್ಮಗಾಂಧೀಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿ ಒಬ್ಬ ಶ್ರೇಷ್ಠ ಹಿಂದೂ. ಅಂತಹ ಹಿಂದೂ ಭಕ್ತನನ್ನೇ ಗುಂಡಿಕ್ಕಿ ಕೊಂದವರೇ ಇಂದು ಹಿಂದುತ್ವದ ಕುರಿತು ಮಾತನಾಡುತ್ತಿದ್ದಾರೆ. ದೇಶ ರಾಮರಾಜ್ಯವಾಗಬೇಕೆಂಬ ಚಿಂತನೆಯುಳ್ಳ ಗಾಂಧೀಜಿ ಅವರನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸುವವರು ‘ತಾವು ಮಾತ್ರ ಹಿಂದೂಗಳು’ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
ಆರ್‌ಎಸ್‌ಎಸ್ ಸಂಘಟನೆ ಹಾಗೂ ಬಿಜೆಪಿಯವರಿಗೆ ಗೋಡ್ಸೆ ಆರಾಧ್ಯ ದೈವ. ಅಂತಹವರು ಕಾಂಗ್ರೆಸಿಗರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಮನುಷ್ಯರ ನಡುವೆ ವೈಷಮ್ಯ ಬೆಳೆಸುವುದನ್ನು ಯಾವ ಧರ್ಮವೂ ಬೋಧಿಸುವುದಿಲ್ಲ. ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಒಳಿತನ್ನು ಬಯಸುತ್ತದೆ ಎಂದರು.
ಮಹಾತ್ಮಾ ಗಾಂಧಿ ಶ್ರೇಷ್ಠ ಹಿಂದೂ. ಅವರು ತಮ್ಮ ಜೀವನದುದ್ದಕ್ಕೂ ಸತ್ಯ ಮತ್ತು ಅಹಿಂಸೆಯನ್ನು ಪಾಲಿಸಿದರು. ಗಾಂಧಿಜೀಯವರು ನುಡಿದಂತೆ ನಡೆಯುತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಅವರ ತತ್ಪಾದರ್ಶಗಳೇ ದಾರಿದೀಪ ಎಂದ ಅವರು, ದೇಶ ವಿಭಜನೆಯಾದಾಗ ಸ್ವಾತಂತ್ರ್ಯವನ್ನು ಸಂಭ್ರಮಿಸದೇ ಹಿಂದೂ ಮುಸಲ್ಮಾನರ ನಡುವೆ ಸೌಹಾರ್ದತೆಯನ್ನು ಸ್ಥಾಪಿಸಲು ಗಾಂಧೀಜೀ ಅವರು ಶ್ರಮಿಸಿದರು.
ಭಾರತದ ಹಿಂದೂಗಳು ಪಾಕಿಸ್ತಾನಕ್ಕೆ ಹೋಗದೇ ಇಲ್ಲಿಯೇ ಉಳಿಯಬೇಕೆಂದು ಪ್ರಯತ್ನಿಸಿದರು ಎಂದು ತಿಳಿಸಿದರು.
ಬಿಜೆಪಿಯವರು ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ರಾಮಭಕ್ತರಾಗಿದ್ದ ಗಾಂಧೀಜಿ ಅವರನ್ನು ಕೊಂದ ಗೋಡ್ಸೆಯ ತತ್ವ ಪಾಲಿಸುವವರನ್ನು ಜನರು ನಂಬುವುದಿಲ್ಲ.
ಬಿಜೆಪಿಯವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ಕೇವಲ ಬಾಯಿ ಮಾತಾಗಿದ್ದು, ಜಾತ್ಯಾತೀತತೆಯಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ದೇಶಭಕ್ತಿಯ ಕುರಿತು ಕಾಂಗ್ರೆಸಿಗರಿಗೆ ಸಲಹೆ ನೀಡುವ ಅಗತ್ಯ ಬಿಜೆಪಿಯವರಿಗಿಲ್ಲ ಎಂದರು.