ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜನರಿಗೆ ಮಂಕುಬೂದಿ ಎರಚುವುದಕ್ಕಾಗಿ ಬರುತ್ತಾರೆಯೇ ಹೊರತು ಜನರು ಮತ್ತು ರೈತರ ಹಿತ ಕಾಪಾಡುವುದಕ್ಕಲ್ಲ ಎಂದು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಟೀಕಿಸಿದರು.
ಮಂಗಳವಾರ ನಗರದ ಮೈಷುಗರ್ ಕಂಪನಿ ಮೈದಾನದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾರಂಭ ಮತ್ತು ಡಿಸಿಸಿ ಬ್ಯಾಂಕ್‌ನ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ವಿತರಣೆ ಹಾಗೂ ಮಾಹಿತಿ ನೀಡುವ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.ಸುಳ್ಳು, ತಟವಟ ಹೇಳಿಕೊಂಡು ಕುಮಾರಸ್ವಾಮಿ ಮಂಡ್ಯಕ್ಕೆ ಬರುತ್ತಾರೆಯೇ ವಿನಃ ಅಭಿವೃದ್ಧಿಗೋಸ್ಕರ ಬಂದಿದ್ದನ್ನು ನಾನು ನೋಡಿಯೇ ಇಲ್ಲ. ಅಧಿಕಾರ ಸಿಕ್ಕಾಗ ಅಭಿವೃದ್ಧಿಯನ್ನು ಕೈಚೆಲ್ಲಿ ಕುಳಿತು ಅಧಿಕಾರ ಇಲ್ಲದಿದ್ದಾಗ ಜನರೆದುರು ಕಣ್ಣೀರು ಸುರಿಸಲು ಬರುವುದನ್ನು ರೂಢಿ ಮಾಡಿಕೊಂಡಿದ್ದಾರೆ ಎಂದು ಛೇಡಿಸಿದರು.
ಹಾಲಿಗೆ ನೀರು ಬೆರೆಸಿದವರು ಯಾರು, ಸಾವಿರಾರು ಎಕರೆ ಸರ್ಕಾರಿ ಜಾಗವನ್ನು ಲೂಟಿ ಮಾಡಿದವರು ಯಾರು ಎನ್ನುವುದು ಜಿಲ್ಲೆಯ ಜನರಿಗೆ ಗೊತ್ತಿದೆ. ಚಿತ್ರಗುಪ್ತನನ್ನೇ ಮೀರಿಸುವಂತಹ ಲೆಕ್ಕಾಚಾರದವರು ಜೆಡಿಎಸ್‌ನಲ್ಲಿದ್ದಾರೆ. ಇಡೀ ಜಿಲ್ಲೆಯನ್ನು ಲೂಟಿ ಮಾಡಿ ಅಭಿವೃದ್ಧಿ ಶೂನ್ಯ ಮಾಡಿದ ಕೀರ್ತಿ ಜೆಡಿಎಸ್‌ನವರದ್ದಾಗಿದೆ ಎಂದು ಟೀಕಿಸಿದರು.ಮಹಿಳೆಯರಿಗೆ ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡಲು ಕಾಂಗ್ರೆಸ್ ಅವಕಾಶ ಮಾಡಿಕೊಟ್ಟಿದೆ. ಒಮ್ಮೆ ಹಾಸನ ಮತ್ತು ರಾಮನಗರಕ್ಕೆ ಹೋಗಿ ನೋಡಿಕೊಂಡು ಬನ್ನಿ. ಆ ಎರಡೂ ಜಿಲ್ಲೆಗಳ ಅಭಿವೃದ್ಧಿ ಹೇಗಿದೆ. ಮಂಡ್ಯ ಸ್ಥಿತಿ ಏಕೆ ಹೀಗಿದೆ ಎಂದು ನೀವೇ ಯೋಚಿಸಿ. ಅಭಿವೃದ್ಧಿಯಲ್ಲಿ ಮಂಡ್ಯಕ್ಕೆ ವಂಚನೆ ಮಾಡಿದವರು ಮತ್ತೆ ಯಾವ ಮುಖ ಹೊತ್ತುಕೊಂಡು ಇಲ್ಲಿಗೆ ಬರುತ್ತೀರಿ ಎಂದು ಪ್ರಶ್ನಿಸಿದರು.
ಮಂಡ್ಯದ ನೀರಿಗೆ ಜವಾಬ್ದಾರರಲ್ಲ, ಕಾರ್ಖಾನೆಗೆ ಜವಾಬ್ದಾರಿಯಾಗೋಲ್ಲ, ಉದ್ಯೋಗ ಸೃಷ್ಟಿಗೆ ಜವಾಬ್ದಾರರಲ್ಲ. ಯಾವುದಕ್ಕೂ ಭರವಸೆಯಾಗದ ಮೇಲೆ ಮಂಡ್ಯಕ್ಕೆ ಮೊಸಳೆ ಕಣ್ಣೀರು ಸುರಿಸಲು ಬರುತ್ತೀರಾ. ಇಂತಹವರಿಗೆ ಜನರು ಛೀಮಾರಿ ಹಾಕಬೇಕು ಎಂದು ಖಾರವಾಗಿ ಹೇಳಿದರು.ಬಿಜೆಪಿಯವರು 40 ಪರ್ಸೆಂಟ್ ಗಿರಾಕಿ, ಕುಮಾರಸ್ವಾಮಿ ಮೋಜಿನ ಗಿರಾಕಿ. ಇಲ್ಲಿ ಇಬ್ಬರೂ ಸೇರಿಕೊಂಡು ಮಂಡ್ಯವನ್ನು ಮಂಗಳೂರು ಮಾಡುವುದಕ್ಕೆ ಹೊರಟಿದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ. ದ್ವೇಷಕ್ಕೆ ಇಲ್ಲಿ ಅವಕಾಶವಿಲ್ಲ ಎಂದ ನರೇಂದ್ರಸ್ವಾಮಿ, ಕೇಂದ್ರದಿಂದ ಹಣ ತರುವ ವಿಚಾರವಾಗಿ ನಮಗೆ ತಾಕತ್ತು, ದಮ್ಮು ಇಲ್ಲ ಎನ್ನುತ್ತೀರಲ್ಲಾ, ಬಿಜೆಪಿಯ 26, ಜೆಡಿಎಸ್-1, ಪಕ್ಷೇತರ ಸಂಸದರು ಸೇರಿ ಕೇಂದ್ರದಿಂದ ಬರಪರಿಹಾರ ಹಣ ತಂದು ನಿಮ್ಮದಮ್ಮು-ತಾಕತ್ತು ಪ್ರದರ್ಶಿಸಿ. ರಾಜ್ಯದ ಗಡಿಯಿಂದಲೇ ನಿಮ್ಮನ್ನು ಆರತಿ ಬೆಳಗಿ ಸ್ವಾಗತಿಸಿ, ಸನ್ಮಾನ ಮಾಡುತ್ತೇವೆ. ಅಭಿವೃದ್ಧಿಗೆ ಕೊಡುಗೆ ನೀಡಲಾಗದವರು ಕ್ಷುಲ್ಲಕ ರಾಜಕಾರಣ ಮಾಡುವುದಕ್ಕೆ ಇಲ್ಲಿಗೆ ಬರುತ್ತಾರೆ ಎಂದು ಕಿಡಿಕಾರಿದರು.