ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ - ಭೂ ಅಕ್ರಮಗಳಲ್ಲಿ ಇಡೀ ಕಾಂಗ್ರೆಸ್‌ ನಾಯಕತ್ವ ಭಾಗಿ ಆರೋಪ

| Published : Oct 15 2024, 06:14 AM IST / Updated: Oct 15 2024, 06:15 AM IST

bjp flag

ಸಾರಾಂಶ

ಭೂ ವ್ಯವಹಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನ ಸಂಪೂರ್ಣ ಉನ್ನತ ನಾಯಕತ್ವ (ಖರ್ಗೆ) ಭಾಗಿಯಾಗಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ ಹಾಗೂ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ನವದೆಹಲಿ : ಭೂ ವ್ಯವಹಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರದಲ್ಲಿ ಕಾಂಗ್ರೆಸ್‌ನ ಸಂಪೂರ್ಣ ಉನ್ನತ ನಾಯಕತ್ವ (ಖರ್ಗೆ) ಭಾಗಿಯಾಗಿದೆ ಎಂದು ಬಿಜೆಪಿ ಸೋಮವಾರ ಆರೋಪಿಸಿದೆ ಹಾಗೂ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್‌ ಖರ್ಗೆ ಅವರು, ತಮ್ಮ ಕುಟುಂಬದ ಟ್ರಸ್ಟ್‌ಗೆ ಹಂಚಿಕೆ ಆಗಿದ್ದ ಭೂಮಿಯನ್ನು ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರಕ್ಕೆ ಮರಳಿಸಲು 2 ದಿನದ ಹಿಂದೆ ನಿರ್ಧರಿಸಿದ್ದರು.

ಈ ಬಗ್ಗೆ ಸೋಮವಾರ ಮಾತನಾಡಿದ ಬಿಜೆಪಿ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ, ‘ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಭೂಮಿ ವಾಪಸು ಮಾಡಲಾಗಿದೆ. ಆದರೆ ಇದರಿಂದ ಭೂ ಅಕ್ರಮ ನಡೆದಿದೆ ಎಂಬುದು ಸಾಬೀತಾಗಿದೆ. ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿ ಮತ್ತು ವಿನೋಬಾ ಭಾವೆಯವರ ‘ಭೂದಾನ’ ಚಳವಳಿ ಜತೆ ಸಂಬಂಧ ಹೊಂದಿದ್ದ ಪಕ್ಷವು ಈಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಪ್ರೇರಣೆಯಿಂದ ‘ಭೂಕಬಳಿಕೆ’ ಪಕ್ಷವಾಗಿ ಮಾರ್ಪಟ್ಟಿದೆ’ ಎಂದರು.

‘ನ್ಯಾಷನಲ್‌ ಹೆರಾಲ್ಡ್‌ ಪರಭಾರೆ ಕೇಸಿನಲ್ಲಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಆರೋಪಿಗಳು. ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಕಮಲ್ ನಾಥ್ ಮತ್ತು ಭೂಪೇಶ್ ಬಾಘೇಲ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧವೂ ಭೂಅಕ್ರಮ ಅರೋಪವಿದೆ. ಹೀಗೆ ಇಡೀ ಕಾಂಗ್ರೆಸ್‌ನ ಸಂಪೂರ್ಣ ಉನ್ನತ ನಾಯಕತ್ವವು ಭೂಕಬಳಿಕೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದು ಸಾಬೀತಾಗಿದೆ. ಕದ್ದ ಆಸ್ತಿಯನ್ನು ಹಿಂದಿರುಗಿಸಲು ನಿರ್ಧರಿಸಿದರೆ ಕಳ್ಳನನ್ನು ಬಿಡುವುದಿಲ್ಲ. ಹೀಗಾಗಿ ಭೂಮಿ ವಾಪಸ್ ನೀಡಿದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಲ್ಲವೇ’ ಎಂದು ಪ್ರಶ್ನಿಸಿದರು.

ರೈತ ಹೋರಾಟಕ್ಕೆ ಕಾಂಗ್ರೆಸ್‌ ಕುಮ್ಮಕ್ಕು ಸಾಬೀತು: ಬಿಜೆಪಿ

ನವದೆಹಲಿ: ‘ಹರ್ಯಾಣದಲ್ಲಿ ರೈತರು ಕೇಂದ್ರದ 3 ಕೃಷಿ ಕಾಯ್ದೆಗಳ ವಿರುದ್ಧ ಹೋರಾಡಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದರು. ಆದರೆ ಅದನ್ನು ಲಾಭ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್‌ ವಿಫಲವಾಯಿತು’ ಎಂದು ರೈತ ಸಂಘದ ನಾಯಕ ಗುರ್ನಾಮ್ ಸಿಂಗ್ ಚರುನಿ ಅವರ ಹೇಳಿಕೆ ಉಲ್ಲೇಖಿಸಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ‘ರೈತ ಹೋರಾಟವು ಕಾಂಗ್ರೆಸ್‌ ಪ್ರಾಯೋಜಿತ ಎಂಬುದು ಈಗ ಸ್ಪಷ್ಟವಾಗಿದೆ. ಕಾಂಗ್ರೆಸ್‌ ಮುಖವಾಡ ಕಳಚಿದೆ’ ಎಂದರು.